ಗ್ರಹಣ ಇದೆ ಅಂದತಕ್ಷಣ ನಮ್ಮ ಭಾಗದಲ್ಲಿ ಯಾವಾಗ ಗ್ರಹಣ ಆಗುತ್ತದೆ ಎಂದು ಕಾಯ್ತಾ ಇದ್ದೆ. ಐದು ಗಂಟೆಯಾದೊಡನೇ ಧಡ್ ಅಂತ ಎದ್ದು ಹೆಗಲಿಗೆ ಕೆಮರಾ ಬ್ಯಾಗ್ ನೇತು ಹಾಕಿಕೊಂಡು ಸ್ಕೂಟಿ ಕಿವಿ ತಿರುವಿದೆ. ಮನೆಯ ಬಳಿ ಈ ಸೂರಪ್ಪ ಸಿಗಲ್ಲ ಅಂತ ನನಗೆ ಗೊತ್ತು. ಸುತ್ತಲೂ ಎತ್ತರದ ಕಟ್ಟಡಗಳಿರುವಾಗ ಸೂರಪ್ಪ ಹೇಗೆ ತಾನೇ ಸಿಗಲು ಸಾಧ್ಯ!?
ನೇರ ಊರ ಹೊರಗೆ ಒಂದು ಪುಟ್ಟ ಬೆಟ್ಟಕ್ಕೆ ಹೋದೆ. ಮೇಲೇರಿ ಕುಳಿತವನೇ ಕೆಮರಾ ಸೆಟ್ ಮಾಡಿದೆ. ವಾಹ್ ಝೂಮ್ ಮಾಡಿದಾಗ ಸೂರಪ್ಪನಿಗೆ ಚೂರು ಗ್ರಹಣ ಹಿಡಿದದ್ದು ಕಾಣಿಸಿತು. ಪಟಪಟನೆ ಕ್ಲಿಕ್ಕಿಸಿದೆ. ಸರಿಯಾಗಿ 5-48ಕ್ಕೆ ಗ್ರಹಣದ ಮಧ್ಯಾವಧಿ ಎಂದು ಓದಿದ್ದೆ. ಅದೇ ಸಮಯಕ್ಕೆ ಕಾದಿದ್ದವನೇ ಕ್ಲಿಕ್ ಮಾಡಿದೆ. 5-58ಕ್ಕೆ ಗ್ರಹಣ ಬಿಡುಗಡೆ. ಅಲ್ಲಿಯವರೆಗೂ ಒಂದಷ್ಟು ಕ್ಲಿಕ್ ಮಾಡಿ ನಿಡಿದಾದ ಉಸಿರುಬಿಟ್ಟೆ.
ಶತಮಾನದ ಅದೂ ನನ್ನ ಆಯುಷ್ಯದ ಸಮಯದಲ್ಲಿ ಕಂಡ ಗ್ರಹಣಗಳನ್ನೆಲ್ಲ ಸೆರೆಹಿಡಿಯುವ ಆಸೆ ನನಗೆ ಸದಾ ಇರುತ್ತದೆ. ಹಾಗಾಗಿ ಏನೇ ಇದ್ದರೂ ಗ್ರಹಣದ ಸಮಯವನ್ನು ಮಿಸ್ ಮಾಡೋದಿಲ್ಲ.
ಸೂರಪ್ಪನೂ ಗ್ರಹಣದಿಂದ ಸಾಕಾಗಿ ಕೆಂಪಗಾಗಿ ಮುಳುಗತೊಡಗಿದ್ದ. ಕೆಳಗೆ ಹೊಲದಲ್ಲಿ ಸಂಜೆಯ ಮಂಜು ನಿಧಾನವಾಗಿ ಆವರಿಸತೊಡಗಿತ್ತು. ಮೆಲ್ಲನೆ ಸೂರಪ್ಪನಿಗೆ ನಾನೇ ಮರೆಯಾಗುವಂತೆ ಬೆಟ್ಟದಿಂದ ಕೆಳಗಿಳಿದೆ. ಹೀಗೊಂದು ಸುಂದರ ಗ್ರಹಣ ನನ್ನ ಕೆಮರಾದಲ್ಲಿ ಹಾಗೂ ನನ್ನ ಕಣ್ಣುಗಳಲ್ಲಿ ದಾಖಲಾಯಿತು.
ಚಿತ್ರ-ಬರಹ: ಸಿದ್ಧರಾಮ ಕೂಡ್ಲಿಗಿ
*****