ಅವ್ವ ಕೊಟ್ಟ ಬೆಳಕಿನ ಪದ
*ಕತ್ಲಿದ್ದ ಕಡೆ
ಪುಟ್ದೊಂದು ದೀಪವಾಗು
ನಿನ್ ಕತ್ಲೂ ಕಳೀತದೆ!
*ಸಂಕ್ಟ ಹೇಳೋರ್ಗೆ
ಕಿವಿಯಾಗು
ನಿನ್ ದುಗುಡ ಕಡಿಮೆಯಾಗ್ತದೆ!
*ಕಣ್ಣೀರಿಗೆ ಕಣ್ಣೀರಾಗು
ನಗು ಬಿತ್ತೋದು
ಹೇಗಂತ ಹೊಳೀತದೆ!
*ದೀಪ ಹಚ್ಲೇಬೇಕಂತ
ಹಠ ಬೇಡ ಬಿಡು
ಯಾರ್ದಾದ್ರು ಕಣ್ಣಲ್ಲಿ ಬೆಳಕಾಗು!
*ಬೆಳಕಾಗ್ಬೇಕಂತ
ಸುಟ್ಕೊಬೇಡ ಮಗಾ
ನಿನ್ನೊಳಗಿದ್ರೆ ಹಂಚೊಕಾಯ್ತದೆ!
*ಜತೆಲಿರೋ ಜೀವಗಳು
ನಿನ್ನಿಂದ ನೋಯ್ದಿದ್ರೆ
ನೀನೇ ಎಷ್ಟೊಂದು ಬೆಳ್ಕು!
*ಕತ್ಲು ಬರತ್ತೆ ಹೋಗತ್ತೆ
ಸಿಕ್ಕ ಬೆಳಕನ್ನು
ಜೋಪಾನ ಮಾಡ್ಕೊ!
*ಹಬ್ಬ ಆದ್ಮೇಲೆ
ಹಣತೆ ಮೂಲೆ ಸೇರ್ತವೆ
ಬೆಳಕು ಬೆಳಿತಾನೇ ಇರ್ಬೇಕು!
-ರಂಹೊ(ರಂಗಮ್ಮಹೊದೇಕಲ್),
ತುಮಕೂರು
****”