ಬಳ್ಳಾರಿ, ಅ.30: ಜಿಲ್ಲೆಯ ತೋರಣಗಲ್ಲು ಜೆ ಎಸ್ ಡಬ್ಲ್ಯು ಸಮೂಹದ ʼಜಿಂದಾಲ್ ವಿಜಯನಗರ ಏರ್ಪೋರ್ಟ್ʼನಿಂದ ಬೆಂಗಳೂರು ಹಾಗು ಹೈದರಾಬಾದ್ ವಿಮಾನ ಸೇವೆಗೆ ಭಾನುವಾರ (ಅ. 30) ಚಾಲನೆ ನೀಡಲಾಯಿತು. ಅಲಿಯನ್ಸ್ ಏರ್ ಸಂಸ್ಥೆಯ ವಿಮಾನಗಳು ಸೇವೆ ಒದಗಿಸಲಿದೆ.
ಮುಖ್ಯ ಅತಿಥಿಗಳಾಗಿದ್ದ ಸಂಡೂರು ಶಾಸಕ ಇ ತುಕಾರಾಂ, ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟಿ, ನಾಗರಿಕ ವಿಮಾನಯಾನ ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಶ್ರೀಮತಿ ಉಷಾ ಪದಿ, ಜೆ.ಎಸ್.ಡಬ್ಲ್ಯೂ. ಸ್ಟೀಲ್ ವಿಜಯನಗರ ಮತ್ತು ಸೇಲಂ ವರ್ಕ್ಸ್ ಅಧ್ಯಕ್ಷ ಪಿ.ಕೆ. ಮುರುಗನ್ ಸೇರಿದಂತೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ಅಲಾಯನ್ಸ್ ಏರ್ ಅಧಿಕಾರಿಗಳು, ಬಳ್ಳಾರಿ ಜಿಲ್ಲಾಡಳಿತದ ತಂಡ ಮತ್ತು ಜೆ.ಎಸ್.ಡಬ್ಲ್ಯೂ.ಸಮೂಹದ ಇತರ ಅಧಿಕಾರಿಗಳು ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ವಿಮಾನಯಾನಕ್ಕೆ ಚಾಲನೆ ನೀಡಿದರು.
ಪ್ರಧಾನಮಂತ್ರಿಯವರ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯು ಭಾರತದ ಜನರಿಗೆ ಅನುಕೂಲಕರ ಪ್ರಯಾಣದ ಆಯ್ಕೆಯಾಗಿದೆ ಎಂದು ಸಾಬೀತುಪಡೆಸಿದೆ. ಈ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆಯ ಹಿಂದಿನ ಉದ್ದೇಶಗಳನ್ನು ಅರಿತುಕೊಂಡ ನಂತರ ಜೆ.ಎಸ್.ಡಬ್ಲ್ಯೂ. ಸಮೂಹದ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು ನಾಗರಿಕ ವಿಮಾನಯಾನ ಸಚಿವಾಲಯದ ಉಡಾನ್ ಉಪಕ್ರಮದ ಪ್ರಾರಂಭದ ಸಮಯದಲ್ಲಿ ವಿಮಾನ ಕಾರ್ಯಾಚರಣೆಗಳಿಗೆ ಅವಕಾಶ ಕಲ್ಪಿಸಿದ ದೇಶದ ಮೊದಲ ಖಾಸಗಿ ವಿಮಾನ ನಿಲ್ದಾಣವಾಗಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಈ ವಿಮಾನ ನಿಲ್ದಾಣವೂ ನಿಭಾಯಿಸಿದೆ.
ಅಲಯನ್ಸ್ ಏರ್, ಪ್ರಾದೇಶಿಕ ಸಂಪರ್ಕ ಯೋಜನೆಯಡಿ ವಿದ್ಯಾನಗರದಿಂದ (ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು) ಹೈದರಾಬಾದ್ ಮತ್ತು ಬೆಂಗಳೂರಿಗೆ ಸಂಪರ್ಕಿಸುವ ಏಕೈಕ ವಿಮಾನಯಾನ ಸಂಸ್ಥೆಯಾಗಿದೆ ಮತ್ತು ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಉಡಾನ್ ನಲ್ಲಿ ಉತ್ಸುಕವಾಗಿ ಭಾಗವಹಿಸಿದೆ. ಈ ಭಾಗದ ಜನತೆಗೆ ಸಹಾಯವಾಗುವುದಲ್ಲದೆ, ಎಲ್ಲಾ ಯಾತ್ರಿಕರಿಗೆ ಕೈಗೆಟುಕುವ ದರದಲ್ಲಿ ವಿಮಾನಯಾನ ಸಂಪರ್ಕವನ್ನು ಒದಗಿಸುತ್ತದೆ.
ಜೆ.ಎಸ್.ಡಬ್ಲ್ಯೂ. ಸ್ಟೀಲ್ ಲಿಮಿಟೆಡ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹಲವಾರು ಉಕ್ಕು ಮತ್ತು ಗಣಿಗಾರಿಕೆ ಕಂಪನಿಗಳಿರುವುದರಿಂದ ಬಳ್ಳಾರಿ ಜಿಲ್ಲೆಯು ಪ್ರಮುಖ ವ್ಯಾಪಾರೋದ್ಯಮ ಮತ್ತು ಪ್ರವಾಸಿ ತಾಣವಾಗಿದೆ ಮಾತ್ರವಲ್ಲ ಈ ಪ್ರದೇಶವು, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವಿಜಯನಗರ ಸಾಮ್ರಾಜ್ಯದ ಕೇಂದ್ರಬಿಂದುವಾದ ಹಂಪಿಯನ್ನು ಸಹ ಹೊಂದಿದೆ. ಬಳ್ಳಾರಿ, ವಿಜಯನಗರ ಜಿಲ್ಲೆಯ ಪರಿಸರದಲ್ಲಿ ದರೋಜಿ, ಗುಡೆಕೋಟೆ ಕರಡಿಧಾಮವೂ ಇದೆ.
ಸಂಡೂರ್ ಕಬ್ಬಿಣದ ಅದಿರು ಗಣಿ ಮತ್ತು ಬಳ್ಳಾರಿ ಕೋಟೆಯಂತಹ ಹಲವಾರು ಪ್ರವಾಸಿ ತಾಣಗಳಿವೆ. ಹೈದರಾಬಾದ್ ನಿಂದ ಹಂಪಿ, ಸಂಡೂರು, ಬಳ್ಳಾರಿ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ಹೊಸ ವಾಯು ಮಾರ್ಗದಿಂದ ಅಂತರಾಷ್ಟ್ರೀಯ ಪ್ರವಾಸಿಗರಿಗೆ ಮತ್ತು ಉದ್ಯಮಿಗಳಿಗೆ ಅನುಕೂಲವಾಗಲಿದೆ.
ಶಾಸಕ ಇ ತುಕಾರಾಂ ಮತ್ತು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಮಾತನಾಡಿ ಜೆ.ಎಸ್.ಡಬ್ಲ್ಯೂ. ತನ್ನ ಖಾಸಗಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನಯ ಸಹಪಾಲುದಾರನಾಗಿಸಿದಕ್ಕೆ ಶ್ಲಾಘಿಸಿದರು. ಹೈದರಾಬಾದ್ ಮತ್ತು ಬೆಂಗಳೂರಿಗೆ ಪ್ರಯಾಣಿಸಲು ಇದು ಅನುಕೂಲವಾಗುವುದಲ್ಲದೆ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.
ಜೆ.ಎಸ್.ಡಬ್ಲ್ಯೂ. ಸ್ಟೀಲ್ ವಿಜಯನಗರ ಮತ್ತು ಸೇಲಂ ವರ್ಕ್ಸ್ನ ಅಧ್ಯಕ್ಷ ಪಿ.ಕೆ. ಮುರುಗನ್ ಮಾತನಾಡಿ ಸರ್ಕಾರ ಜನರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಜೆ.ಎಸ್.ಡಬ್ಲ್ಯೂ. ಬದ್ಧವಾಗಿದೆ ಹಾಗೂ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಕಾರ್ಯಾಚರಣೆಗಳಿಗೆ ಜೆ.ಎಸ್.ಡಬ್ಲ್ಯೂ ತನ್ನ ನಿಯಮಿತ ಬೆಂಬಲವನ್ನು ಸರ್ಕಾರಕ್ಕೆ ನೀಡುವುದರಿಂದ ಹಿಂದೆ ಸರಿಯುವುದಿಲ್ಲ ಎಂದರು.
ಹೈದರಾಬಾದ್ ಹಾಗೂ ಬೆಂಗಳೂರು ನಗರಗಳು ಈ ಪ್ರದೇಶದ ಜನರಿಗೆ ಪ್ರಮುಖ ಕೇಂದ್ರಗಳಾಗಿವೆ. ಈ ವಿಮಾನಯಾನವು, ಕಲ್ಯಾಣ-ಕರ್ನಾಟಕ ಮತ್ತು ಕಿತ್ತೂರು-ಕರ್ನಾಟಕ ಪ್ರದೇಶದ ಜನರ ಜೀವನವನ್ನು ಸುಗಮಗೊಳಿಸುವುದಲ್ಲದೆ, ರಾಜ್ಯದ ರಾಜಧಾನಿಗಳಿಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರಕ್ಕೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ. ಲಭ್ಯವಿರುವ ಸೌಲಭ್ಯವನ್ನು ಇನ್ನಷ್ಟು ಬಲಪಡಿಸಲು, ಜೆ.ಎಸ್.ಡಬ್ಲ್ಯೂ. ಸಮೂಹವೂ ಕಳೆದ ಮೂರು ವಷಗಳಲ್ಲಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮತ್ತು ನವೀಕರಣಕ್ಕಾಗಿ ರೂ. 48 ಕೋಟಿ ಹೂಡಿಕೆ ಮಾಡಿದೆ. ಇದರ ಜೊತೆಗೆ ಟರ್ಮಿನಲ್ ಸೌಲಭ್ಯಗಳು ಮತ್ತು ಯಾತ್ರಿಗಳ ಸುರಕ್ಷತೆಯನ್ನು ಸುಧಾರಿಸಲು, 12 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಹಾಗೂ ಮುಂದಿನ 6-8 ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ.
*****