ಬಳ್ಳಾರಿ, ನ.1: ವಿವಿಧ ವೃತ್ತಿಗಳಲ್ಲಿ ತಮ್ಮ ದುಡಿಮೆ ಕಂಡುಕೊಂಡಿರುವ ಬಳ್ಳಾರಿಯ ಮುತ್ತು ರಾಜ್ ಗೆಳೆಯರ ಬಳಗದಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಕರ್ನಾಟಕ ರತ್ನ ಡಾ. ಪುನಿತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರವನ್ನು ಸರ್ಕಾರಿ ಶಾಲೆಯ 500ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ವೀಕ್ಷಣೆ ಮಾಡಿಸಲಾಯಿತು.
ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿ ಸೇರಿದ ಶಾಲಾ ಮಕ್ಕಳೊಂದಿಗೆ ಮುತ್ತುರಾಜ್ ಗೆಳೆಯರ ಬಳಗದ ಹಲಕುಂದಿ ಗ್ರಾಮ ಪಂಚಾಯ್ತಿ ಸದಸ್ಯ ವಿರೂಪಾಕ್ಷಿ, ಭಾಷ, ಹರೀಶ್, ರಮೇಶ್ ನಾಯ್ಕ್, ವೆಂಕಟೇಶ್, ಪವನ್, ಹೆಚ್.ಕೆ ಅಂಜಿನಪ್ಪ, ಹೊನ್ನೂರುಸ್ವಾಮಿ, ಗೋಪಾಲ್, ಗೌರೀಶ್, ಇಬ್ರಾಹಿಂ, ಸಂಗನಕಲ್ಲು ಕೃಷ್ಣ ಮೊದಲಾದವರು ನಟರಾಜ್ ಥೇಟರ್ ವರೆಗೆ ಪಾದಯಾತ್ರೆಯಲ್ಲಿ ಸಾಗಿ ಪರಿಸರ ಸಂರಕ್ಷಣೆ ಕುರಿತಾಗಿ ವಿಷಯ ಒಳಗೊಂಡಿರುವ ಗಂಧದ ಗುಡಿ ಸಿನಿಮಾ ವೀಕ್ಷಿಸಿದರು.
ಗಂಧದ ಗುಡಿ ವೀಕ್ಷಣೆಯಿಂದ ತಾವು ನಾಡಿನ ನೆಲ, ಜಲ, ಪ್ರಾಣಿ ಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿಸಿ ಕೊಳ್ಳಬೇಕೆಂಬ ಅರಿವು ಉಂಟಾಯಿತು ಎಂದು ಸಿನಿಮಾ ವೀಕ್ಷಿಸಿದ ಮಕ್ಕಳು ಹೇಳಿದರು.
ಹಲಕುಂದಿ ಸಹಿಪ್ರಾ ಶಾಲೆ, ಸಕಿಪ್ರಾ ಶಾಲೆ ವಿಬಿಎಸ್ಮಠ, ಹೊನ್ನಾಳಿ, ಹೊನ್ನಾಳಿ ತಾಂಡ, ಚರಕುಂಟೆ, ಮಿಂಚೇರಿ, ಸಂಜೀವರಾಯನ ಕೋಟೆ, ಸಂಗನಕಲ್ಲು ಸೇರಿದಂತೆ ತಾಲೂಕಿನ ಹಲವು ಶಾಲೆಗಳ ವಿದ್ಯಾರ್ಥಿಗಳು ಸಿನಿಮಾ ವೀಕ್ಷಿಸಿದರು ಎಂದು ಹಲಕುಂದಿ ಗ್ರಾಮದ ಯುವ ಮುಖಂಡ ಹೆಚ್ ಕೆ ಅಂಜಿನಪ್ಪ ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದರು.
ಪೂರ್ವ ವಲಯದ ಬಿಇಓ, ವಿವಿಧ ಶಾಲೆಗಳ ಮುಖ್ಯ ಗುರುಗಳು, ಸಹ ಶಿಕ್ಷಕರು, ಹಲಕುಂದಿ ಕ್ಲಸ್ಟರ್ ಸಿ ಆರ್ ಪಿ ಶ್ರೀನಿವಾಸ ಅವರ ಸಹಕಾರಕ್ಕೆ
ಅಂಜಿನಪ್ಪ, ರಮೇಶ್ ನಾಯ್ಕ ಮತ್ತಿತರ ಮುಖಂಡರು ಧನ್ಯವಾದ ಅರ್ಪಿಸಿದರು.
*****