ಬಳ್ಳಾರಿಯಲ್ಲಿ ಸಂಭ್ರಮದ ರಾಜ್ಯೋತ್ಸವ: ಏಕೀಕರಣಕ್ಕೆ ಶ್ರಮಿಸಿದ ಎಲ್ಲಾ ಮಹನೀಯರ ಸ್ಮರಣೆ ಅಗತ್ಯ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಬಳ್ಳಾರಿ,ನ.1: ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಎಲ್ಲಾ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ
ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತ ಡಾ.ರಾಜ್‍ಕುಮಾರ್ ರಸ್ತೆಯ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ರಾಜ್ಯಾದ್ಯಂತ ಲಕ್ಷಾಂತರ ಕನ್ನಡಿಗರ ಹೋರಾಟದ ಕಿಚ್ಚು, ಸ್ವಾಭಿಮಾನ, ಅಭಿಮಾನಗಳ ಫಲದಿಂದ ನಾಡು ಏಕೀಕರಣ ವಾಯಿತು. ನ.1ರ ದಿನವನ್ನು ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಕರುನಾಡ ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಏಕೈಕ ಹೋರಾಟಗಾರ ಪಿಂಜಾರ್ ಪೈಲ್ವಾನ್‍ ರಂಜಾನ್‌ಸಾಬ್ ಅವರ ತ್ಯಾಗ, ಬಲಿದಾನ ಯುವಕರಿಗೆ ಸ್ಫೂರ್ತಿ ಎಂದು ಹೇಳಿದರು.
ಕನ್ನಡಿಗರ ಸತತ ಹೋರಾಟದ ಫಲವಾಗಿ ಬಳ್ಳಾರಿಯನ್ನ 1953 ರ ಅಕ್ಟೋಬರ್ 1 ರಂದು, ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದರೊಂದಿಗೆ ಏಕೀಕರಣದ ಪ್ರಕ್ರಿಯೆ ಬಳ್ಳಾರಿಯಿಂದಲೇ ಆರಂಭ ಆಗಿತ್ತು ಎಂದು ತಿಳಿಸಿದರು.
ಕನ್ನಡ ಎಂದರೆ ಪ್ರೀತಿ, ಕನ್ನಡ ಎಂದರೆ ಕೀರ್ತಿ, ಕನ್ನಡ ಎಂದರೆ ಶಕ್ತಿ, ಕನ್ನಡ ಎಂದರೆ ಗೌರವ, ಕನ್ನಡ ಎಂದರೆ ಹೆಮ್ಮೆ, ಕನ್ನಡ ಎಂದರೆ ಹಿರಿಮೆ, ಕನ್ನಡ ಎಂದರೆ ಉಸಿರು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸಚಿವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಲಾ ತಂಡಗಳೊಂದಿಗೆ ವಿವಿಧ ಇಲಾಖೆಯ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.
ಡಾ.ರಾಜ್‍ಕುಮಾರ್ ರಸ್ತೆಯ ನಾರಾಯಣ್‍ರಾವ್(ಕಾಗೆ ಪಾರ್ಕ್) ಪಾರ್ಕ್‍ನಲ್ಲಿರುವ ಭುವನೇಶ್ವರಿ ತಾಯಿಯ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಜಿ.ಸೋಮಶೇಖರರೆಡ್ಡಿ, ಮಹಾನಗರ ಪಾಲಿಕೆಯ ಮಹಾಪೌರರಾದ ಎಂ.ರಾಜೇಶ್ವರಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಪ್ರಸಾದ್, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಪಂ ಸಿಇಒ ಲಿಂಗಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್, ಎಡಿಸಿ ಮಂಜುನಾಥ, ಸಹಾಯಕ ಆಯುಕ್ತರಾದ ಡಾ.ನಯನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಟರಾಜ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಶಾಲಾ ಮಕ್ಕಳು, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಇದ್ದರು.
*****