ಅನುದಿನ ಕವನ-೬೭೨, ಕವಿ: ಹೊಸಪೇಟೆ ವಿಕ್ರಮ ಬಿಕೆ, ಬೆಂಗಳೂರು, ಕವನದ ಶೀರ್ಷಿಕೆ:ಸಮಾನಳು….

ಸಮಾನಳು….

ನನ್ನ ಹೆಣ್ತನಕ್ಕೆ ಗಂಡಾಗಿ
ನನ್ನೊಳಗಿನ ಗಂಡಿಗೆ ಹೆಣ್ಣಾಗಿ
ನನ್ನ ಪೂರ್ಣ ಮಾಡುವ ಅರ್ಧಾಂಗಿ

ಮನಸ್ಸಿಗೆ ಮನಸ್ಸು
ದೇಹಕ್ಕೆ ದೇಹ
ಜೀವಕ್ಕೆ ಜೀವ
ಸಂಭ್ರಮ ಹಂಚುವಾಕೆ

ಸೋತಾಗ ಸೋತು
ಒಳಗೊಳಗೇ ನೊಂದು
ಗೆದ್ದಾಗ ಗೆದ್ದು
ಹೊರಗೆ ಒಳಗೆ ಜಿಗಿದು
ಅಭಿಮಾನಿ ಆಗುವ ಈಕೆ…

ಭುಜಕ್ಕೆ ಭುಜ ಕೊಟ್ಟು
ಸಪ್ತಪದಿಗಳಾಚೆ ಹೆಜ್ಜೆಗೆ ಹೆಜ್ಜೆ ಇಡುತ್ತಾ
ನನ್ನ ಅರ್ಧಕ್ಕೆ ಅರ್ಥ ಬೆರೆಸುವ
ಸಮಾನತೆಯ ಜೀವನ ಕವನ ಬರೆಸುವವಳು
ಸಮಾನಳು

ಅವಳ ಹುಟ್ಟಲ್ಲಿ,
ಮುಟ್ಟನ್ನು ತಡೆದಿಟ್ಟು
ಮುದ್ದಾದ ಮಗುವನ್ನು
ತಂದಿಟ್ಟು ಮುತ್ತಿಟ್ಟ
ಈ ರಮ್ಯ ಬದುಕಿಗೆ
ಕಾರಣ ಆದವಳು…

-ಹೊಸಪೇಟೆ ವಿಕ್ರಮ ಬಿಕೆ, ಬೆಂಗಳೂರು

*****