ಪದ್ಯವಲ್ಲದ್ದು!!
ಅವ್ವಾ
ನಿನ್ನ ಸಮಾಧಿ ಎದುರು
ಕೈ ಜೋಡಿಸಿ ನಿಂತರೂ
ನೋಟ ಚಲಿಸುತ್ತಿರುತ್ತದೆ
ಹೂತ ಜಾಗ ಬಿಟ್ಟು
ಅಲ್ಲಿಯೇ ಮಾರು ಅಳತೆ
ದೂರದ ಮಾವಿನ ತೋಟದಲ್ಲಿ
ಹಸುವಿನ ಮೈ ದಡವುತ್ತಿರಬಹುದಾ!
ನಿನ್ನೆದುರಿಗೆ ಕಟ್ಟೆಯ ಸುತ್ತ ಇರುವ
ಹೂ ಗಿಡಗಳು ಪೊದೆಯಾದವೆಂದು
ಕಂಕಳು ಮುರಿಯುತ್ತಿರಬಹುದಾ!
ಅಲ್ಲಿಯೇ ನಿನ್ನ ಸಮಾಧಿಯ
ಈಚೆ ಬದುವಿನ ಮೇಲೆ
ಹರಡಿಕೊಂಡಿರುವ
ಮುಟ್ಟಿದರೆ ಮುನಿ ಗಿಡವನ್ನು
ಎಬ್ಬುತ್ತಿರಬಹುದಾ!
ಅಲ್ಲೇ ಮೂಲೆಯಲ್ಲಿ
ನೀನೇ ನೆಟ್ಟಿದ್ದ ತೇಗದ ಮರಗಳು
ಮುಗಿಲು ಮುಟ್ಟಿ
ಬಿದ್ದ ತರಗೆಲೆಗಳನ್ನು ಬಾಚಿ
ಗೊಬ್ಬರದ ಗುಂಡಿಗೆ ಎಸೆಯುತ್ತಿರಬಹುದಾ!
ಅಲ್ಲೇ ನಡೂಮಧ್ಯೆ ಇರುವ
ಮುನಿಯಪ್ಪನ ಗುಡಿಗೆ
ಗರಿಕೆ ಪತ್ರೆಯನ್ನಿಟ್ಟು
ಮಕ್ಕಳ ಅಂಗಾಲಿಗೆ
ಮುಳ್ಳು ನಾಟದಿರಲಿ
ಅಂತ ಬೇಡುತ್ತಿರಬಹುದಾ!
ನಿನ್ನ ಸಮಾಧಿಗೆ ನೇರ ಇರುವ
ಪಾರಿಜಾತದ ಮೈ ತುಂಬ
ಆಯುತ್ತ ಆಯುತ್ತ
ನಾನು ಉಂಡ ಗೆಳೆತನದ ಸುಖ
ಲೆಕ್ಕಿಸುತ್ತಿರಬಹುದಾ!
ಮೂಲೆಯಲ್ಲೊಂದಷ್ಟು ಜಾಗದಲ್ಲಿ ನೆಟ್ಟ
ಮೆಣಸಿನಗಿಡ,ಬದನೇಗಿಡ,ಹಲಸಂದೆ,ಹಾಗಲ,ಪುಟ್ಟದೊಂದು ಸೊಪ್ಪಿನ ಮಡಿ
ಕಳೆ ತೆಗೆಯುತ್ತಿರಬಹುದಾ!
ಓಹ್..ಇವಳೊಬ್ಬಳು
ಅಂತ ತಿನ್ನುವ ಅನ್ನದಲ್ಲಿ ತುತ್ತಿಟ್ಟು
‘ರೂಬಿ’ಯನ್ನು ಮುದ್ದಿಸುತ್ತಿರಬಹುದಾ..
ಅಜ್ಜಿಯನ್ನು ಪೊರೆದೆ ಎನ್ನುವ ಕಾರಣಕ್ಕೆ
ಸಿಕ್ಕ ತುಂಡು ಜಮೀನಿಗೆ
ಸಹಿಯೇ ಹಾಕದೆ ನಯವಾಗಿ ವಂಚಿಸುವ ಬಂಧಗಳನ್ನು ನೆನೆದು
ಹೊಂಗೆಮರದಡಿ ನಿಡುಸುಯ್ಯುತ್ತಿರಬಹುದಾ!
ನಿನಗೂ ನನಗೂ ಅವ್ವನಂತಿದ್ದ
ಅಕ್ಕ
ಕಾಡಿಸಿ ಸುಖವಾಗಿ ಬದುಕಿ ಹೋದ
ಅಪ್ಪ
ಅಕಾಲಕ್ಕೆ ಬದುಕಿಗೆ ವಿದಾಯ ಹೇಳಿದ ಸೊಸೆ
ಅವರೊಟ್ಟಿಗೆ ಮಾತನಾಡುತ್ತಿರಬಹುದಾ!
ಹಲಸಿನಮರದಡಿಯ ಹಾಸುಗಲ್ಲಿನ
ಮೂಲೆಗೆ ಕೂತು
ಎಲೆ ಅಡಿಕೆ ಮೆಲ್ಲುತ್ತಾ
ಬಿಕ್ಕುತ್ತಿರಬಹುದಾ!
ನೋಡ ನೋಡುತ್ತ ಕಣ್ಣು ಮಂಜು ಮಂಜು
ನಿನ್ನದೇ ಕೈ ನೆತ್ತಿ ನೇವರಿಸಿ
ಗಟ್ಯಾಗಿರು ಎಂದುಸಿರಿದಂತೆ
ಒಳಗು ಬೆಳಕಾದಂತೆ..!
-ರಂಹೊ, ತುಮಕೂರು
*****