ಅನುದಿನ‌ ಕವನ-೬೮೦, ಕವಿ:ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಕನಕನ ಸ್ವಗತ

ಕನಕನ ಸ್ವಗತ

ಖಡ್ಗದ ಮೊನೆಯ ಇಳಿಸಿದಂದೇ
ನಿನ್ನ ಹುಡುಕಿದೆ ಕೇಶವ
ಹುಡುಕಾಟದೊಳಗೇ ‘ನೀ’ ಅವಿತಿದ್ದೆಯೆಂದು
‘ನಾ’ ಅರಿದಂದು ‘ನೀ’ ತೋರಿದೆ ಅಂದು ಕೇಶವ !

ಸಕಲ ಜೀವರಾದಿಯಾಗಿ
ಅಣುರೇಣುತೃಣಕಾಷ್ಠದೊಳಗಿರುವಿಯೆಂದು
‘ನಾ’ ಹಾಡಿದ ಹಾಡು
ಇವರ ಕಿವಿಗೆ ತಲುಪಲೇ ಇಲ್ಲ ಕೇಶವ !

ಕಿವಿ ಇದ್ದವರು, ಹೃದಯವಿದ್ದವರು,
ಕಣ್ಣಿದ್ದವರು, ತಲೆ ಇದ್ದವರೆಲ್ಲರೂ
ನನ್ನ ಕೀರ್ತನೆಗಳಿಗೆ ತಲೆದೂಗಿದರೇ ಹೊರತು
ಅರಿವಿನೊಳಗಿನ ಅರಿವ ಅರಿಯಲೇ ಇಲ್ಲ ಕೇಶವ !

‘ನಾ’ ಅರಿತಾಗ ‘ನೀ’ ದೊರೆತೆ
ನಾನೀನೆಂಬುದನರಿಯದೇ ನಿನ್ನ
ಬಂದಿಯಾಗಿಸಿದರಲ್ಲೋ ಕೇಶವ !

ಎಲ್ಲೆಡೆಯೂ ಇರುವ ನಿನ್ನ ತೋರದೇ
ನಿನಗೊಂದು ನೆಲೆಯ ಸೃಷ್ಟಿಸಿದರಲ್ಲೋ ಕೇಶವ !

ನೀನಿರದೆ ನಾನಿಲ್ಲ, ನಾನಿರದೆ ನೀನಿಲ್ಲ
ಎಂಬ ತತ್ವವ ತಿಳಿಯದೇ
ಮಂದಿರ, ಜಾತಿ, ಮತಗಳಲಿ
ನನ್ನ, ನಿನ್ನ ಬಂದಿಯಾಗಿಸಿದರಲ್ಲೋ ಕೇಶವ !

ಮನುಜಮತ ಸಾರುವ ಅರಿವಿನ ಕಿಂಡಿಯ
ಇವರಿಗೆ ತೋರೋ ಕಾಗಿನೆಲೆ ಆದಿಕೇಶವ !


-ಸಿದ್ಧರಾಮ ಕೂಡ್ಲಿಗಿ
*****