ವೀರವನಿತೆ ಒನಕೆ ಓಬವ್ವ ವಿಶ್ವದ ಸ್ತ್ರೀ ಕುಲಕ್ಕೇ ಕಲಶಪ್ರಾಯ -ಶಶಿಕಲಾ ರವಿಶಂಕರ್

ಹಿರಿಯೂರು, ನ.11: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಮತ್ತು ತಾಲೂಕು ಆಡಳಿತ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಪ್ರಾಣದ ಹಂಗು ತೊರೆದು ನಾಡ ರಕ್ಷಿಸಿದ ಚಿತ್ರದುರ್ಗದ ಮಹಾತಾಯಿ ವೀರ ವನಿತೆ ಒನಕೆ ಓಬವ್ವ ಜಯಂತೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕಿ ಶಶಿಕಲಾ ರವಿಶಂಕರ್ ಅವರು
ಇಡೀ ವಿಶ್ವದ ಸ್ತ್ರೀ ಕುಲಕ್ಕೇ ಕಲಶಪ್ರಾಯಳಾದ
ವೀರವನಿತೆ ಒನಕೆ ಓಬವ್ವಳನ್ನು ಒಂದು ಸಮುದಾಯಕ್ಕೆ
ಸೀಮಿತ ಮಾಡುವುದು ಸಲ್ಲ ಎಂದರು.
ಸ್ವಾಮಿನಿಷ್ಠೆ, ಸಮಯಪ್ರಜ್ಞೆ, ಕಾರ್ಯದಕ್ಷತೆ ಮೆರೆದ ಅಪಾರ ಧೈರ್ಯ-ಸಾಹಸದಿಂದ ಏಕಾಂಗಿಯಾಗಿ ಶತೃಸೈನ್ಯವನ್ನು ತನ್ನ ಒನಕೆ ಯಿಂದಲೇ ಸೆದೆಬಡಿದ ಅಪ್ರತಿಮ‌ ಮಹಿಳೆ ಒನಕೆ ಓಬವ್ವ ಎಂದು ಶ್ಲಾಘಿಸಿದರು.
ವೀರವನಿತೆಗೆ ಸಮಸ್ತರೂ ಗೌರವ ಸಲ್ಲಿಸುವ ದಿನವಿದು ಎಂದರು.
ರಾಷ್ಟ್ರೀಯ ಹಬ್ಬಗಳ ದಿನಾಚರಣೆಯ ಸಾಲಿನಲ್ಲಿ ನಮ್ಮ ಚಿತ್ರದುರ್ಗದ ಒನಕೆ ಓಬವ್ವಳ ಜಯಂತಿ ಆಚರಣೆ ಸೇರ್ಪಡೆ ಆಗಿರುವುದು ಸಮಸ್ತ ಮಹಿಳೆಯರು ಸಂತಸ ಪಡುವ ವಿಷಯವಾಗಿದೆ ಎಂದು ಹರ್ಷಿಸಿದರು.
ಮುಖಂಡ ಡಿ ಟಿ ಶ್ರೀನಿವಾಸ್ ಅವರು ಒನಕೆ ಓಬವ್ವರ ಸಾಧನೆಯನ್ನು ಕುರಿತು ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶಿಲ್ದಾರ್ ಪ್ರಶಾಂತ ಗೌಡ ಕೆ ಪಾಟೀಲ ಅವರು ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ನಗರಸಭೆ ಪೌರಾಯುಕ್ತ ಡಿ ಉಮೇಶ್, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು , ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
*****