ಅನುದಿನ ಕವನ-೬೮೪, ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ತಾಯಿ(ಮುಕ್ತಕಗಳು)

ತಾಯಿ

ಮನೆಯಲ್ಲಿ ಮಗುವಿರಲು ಸಂತಸವು ತುಂಬಿರಲು
ದಿನವುರುಳಿ ನಗುನಗುತ ಚಿಂತೆಮರೆತು
ಮನದಲ್ಲಿ ಉಲ್ಲಾಸ ಮಗುವಿನಾ ತುಂಟಾಟ
ಮನೆಯಲ್ಲ ಕಳೆಹೊಂದಿ-ಧರಣಿದೇವಿ||

ಮಗುವನ್ನು ನೋಡುತಲಿ ಮಮತೆಯನು ತೋರುತಲಿ
ಸೊಗಸಾದ ಅನುಭವವ ತಾಯಿಪಡೆದು
ಮಿಗಿಲಿಲ್ಲ ಕಂದನಿಗೆ ಪ್ರಪಂಚ ನೀನೆನುತ
ಮುಗಿಲನ್ನೆಮುಟ್ಟಿರಲುಧರಣಿದೇವಿ||

ತಾಯ್ತನದ ಸುಖವದುವೆ ಹೆಣ್ಣಿನಲಿ ಮನೆಮಾಡಿ
ಕಾಯಕದಿ ಮೈಮರೆತು ದಿನಪೂರವು
ಕಾಯುವಳು ಕಂದನನು ಮಡಿಲಲ್ಲಿ ಪೋಷಿಸುತ
ನೋಯುತಲಿ ಬೇಯುತಲಿ-ಧರಣಿದೇವಿ||

ಮಗುವಿನಾ ಪಾಲನೆಗೆ ತನ್ನನ್ನೆ ಮುಡುಪಿಟ್ಟು
ಸಿಗುತಿರುವ ಸಣ್ಣಖುಷಿ ಮನಸಿನಿಂದ
ಬಿಗಿದಪ್ಪಿ ಒಳಗೊಳಗೆ ದು:ಖವನು ತಾನಂಗಿ
ಮಗುವನ್ನು ಮುದ್ದಿಸಲು-ಧರಣಿದೇವಿ||

ಬೆಳೆಸುತಲಿ ತಿಳಿಸುತಲಿ ಜಗದಲ್ಲಿ ಬಾಳುವುದ
ಕಲಿಸುತಲಿ ಬಳಿಯಿರಲು ಸಹಕರಿಸುತ
ಸಲಹೆಗಳ ನೀಡುತಲಿ ಬೇಕಾದ ಸಮಯದಲಿ
ನಲಿಯುತಲಿ ಸಂತಸದಿ ಧರಣಿದೇವಿ||

-ಧರಣೀಪ್ರಿಯೆ, ದಾವಣಗೆರೆ
*****