ಅನುದಿನ ಕವನ-೬೮೬, ಕವಿ: ಎಲ್ವಿ(ಡಾ.ಲಕ್ಷ್ಮಣ‌ ವಿ.ಎ) , ಬೆಂಗಳೂರು

ನಿನ್ನೆ ರಾತ್ರಿ ಅವ್ವ ಬಂದಿದ್ದಳು
ಕನಸಿಗೆ ಎಂದಿನಂತೆ
ಬೆಂಗಳೂರಿನಲಿ ನಾನು ಕಟ್ಟಿಸಿದ
ಮನೆಗೆ ಮೊಟ್ಟ ಮೊದಲ ಬಾರಿ
ಮೆಟ್ಟಿಲು ಹತ್ತಲಾಗದೆ ಒಳ ಮನೆಗೂ
ಬರದೆ ವಾಪಸಾಗಿ ಬಿಟ್ಟಳು

ಅದೇ ಮಾಸಲು ಸೀರೆ
ಎಂದೆಂದಿಗೂ ಮುಗುಳು ಮಾಸದ ಮೋರೆ
ಥಟ್ಟನೆ ಎಚ್ಚರವಾಯಿತು
ದಾರಿ ತಪ್ಪಿ ಬಿಟ್ಟಾಳು,ಛೆ! ಏನೊಂದು ಕಷ್ಟ ಪಟ್ಟಳೊ ಈ ಇಕ್ಕಟ್ಟಿನ ದಾರಿಯ ಊರಿಗೆ ಬರಲು

ಹೊರಗೆ
ನಡುಗುವ ಇರುಳು
ಬಾದಾಮಿ ಮರದ ಎಲೆಯ ಮೇಲೆ
ಮಳೆಯ ಹನಿಯುರುಳು
ಬೀದಿ ಬೀದಿಗೆ ಬೆನ್ನು ತಟ್ಟಿ
ಮೆಲುದುಟಿಯಲಿ ಉಲಿವಂಥ ಜೋಗುಳ
ದನಿ
ಅವ್ವ ಕನಸಿನಲಿ

ವಯಸಾದ ಅವ್ವನಿಗೆ ಈಗ
ಅರಳು ಮರಳು ಕುಂತಲ್ಲಿ ಕೂರದೆ
ನಿಂತಲ್ಲಿ ನಿಲ್ಲದೆ ಮರೆತ
ಜೋಗುಳ ಮತ್ತೆ ಮತ್ತೆ ಹಾಡುತ್ತಾಳೆ
ಲಯ ತಪ್ಪದೆ
ಯಾರು ಕೇಳದಿದ್ದರೂ

ಮೂರು ಕಲ್ಲುಗಳನಿಟ್ಟಲ್ಲಿ
ಒಲೆ
ಮತ್ತೊಂದು ಅವಳು
ಉರಿಯೊಡಲ ಕಿಚ್ಚು ಹಚ್ಚಿ ಸುಟ್ಟ ರೊಟ್ಟಿ
ತಲೆ
ಯ ಮೇಲೆ ಸದಾ ಸೋರುವ ಸೂರು
ತೊಟ್ಟಿಕ್ಕುವ ವಾತ್ಸಲ್ಯ
ಉಂಡಷ್ಟು ಭರ್ತಿಯಾಗುವ
ಬಿದಿರ ಬುಟ್ಟಿ ತುಂಬ ಬಿಳಿ ಜೋಳದ
ರೊಟ್ಟಿ
ತಂದು ಇಟ್ಟು ಹೋಗಿದ್ದಾಳೆ
ಎಷ್ಟೊಂದು ಸಲ ಹೀಗೆ ಕನಸಿನಲಿ
ಮನೆಯೊಳಗೂ ಬರದೆ

ಅರೆ ಹೊಟ್ಟೆಯ ದಿನಗಳಲ್ಲಿ
ನಿದ್ದೆ ಬಾರದ ರಾತ್ರಿಗಳಲಿ
ಕತೆ ಹೇಳುವ ಅವ್ವ ನ ಕತೆಗಳಲ್ಲಿ
ಸಾವಿರದ ದೇವರುಗಳಿಗೆ
ಬಗೆ ಬಗೆಯ ಭಕ್ಷ್ಯ ಭೋಜ್ಯ
ಕಂಡೂ ಕೇಳರಿಯಿದ ವ್ಯಂಜನ ವೈವಿದ್ಯ

ತಾನು ಮಾತ್ರ
ನಾವು ಮಲಗಿದ ಮೇಲೆ
ಮಿಕ್ಕಿದ ಗಂಜಿಯುಂಡು
ಮಲಗುವ ಅವ್ವ – ಮತ್ತೆ ಮತ್ತೆ
ಬಂದು ಹೋಗುತ್ತಾಳೆ ಕನಸಿಗೆ

ಅದೇ ಮಾಸಿದ ಸೀರೆಯಲಿ
ಮಾಸದ ಮುಗಳು ಮೋರೆಯಲಿ
ಬಿಸಿ ಜೋಳದ ರೊಟ್ಟಿ ಮೇಲಿನ
ಬೆಣ್ಣೆಯಂತಹ
ಮೆಲುದುಟಿಯ ಜೋಗುಳ
ಹೊರಗೆ
ಮರದ ಎಲೆಯ ಮೇಲಿನ ಹನಿಯುರುಳುವ
ಹಾಗೆ

-ಎಲ್ವಿ (ಡಾ.ಲಕ್ಷ್ಮಣ ವಿ.ಎ), ಬೆಂಗಳೂರು                                           *****