ಬಳ್ಳಾರಿ, ನ.26: ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಶಿಕ್ಷಣ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಚೈತನ್ಯ ಕಾಲೇಜು ನಿರ್ದೇಶಕ ಡಾ.ಪಿ. ರಾಧಾಕೃಷ್ಣ ಅವರು ಹೇಳಿದರು.
ನಗರದ ಸನ್ಮಾರ್ಗ ಗೆಳೆಯರ ಬಳಗ ಮತ್ತು ಶ್ರೀ ಮಂಜುನಾಥ ಲಲಿತಕಲಾ ಬಳಗ ಸಹಯೋಗದಲ್ಲಿ ಶನಿವಾರ ಸ್ಥಳೀಯ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆ, ಕಾಲೇಜುಗಳಲ್ಲಿ ಓದಿದ ಮಕ್ಕಳಲ್ಲಿ ಸಾಧಿಸುವ ಛಲ, ಧೈರ್ಯ-ಸ್ಥೈರ್ಯ ಹೆಚ್ಚು ಎಂದು ಬಣ್ಣಿಸಿದರು.
ಸರಕಾರಿ ಸಂಸ್ಥೆಗಳಲ್ಲಿ ಓದಿದವರು
ಯಾವುದೇ ಸಂದರ್ಭದಲ್ಲೂ ಕೀಳಿರಿಮೆ ಬೆಳೆಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಶ್ರದ್ಧೆ, ಪರಿಶ್ರಮದಿಂದ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸಾದ್ಯ ಎಂದು ಹೇಳಿದರು.
ಪ್ರತಿಭಾವಂತ ವಿಕಲ ಚೇತನ ಎರಡು ಕೈಗಳಿಲ್ಲದ ಕೊಳಗಲ್ಲು ಗ್ರಾಮದ ಮುಸ್ತಫಾನ ಕುಟುಂಬ ಸಂಕಷ್ಟದಲ್ಲಿರುವ ವಿಚಾರ ಗೊತ್ತಿರಲಿಲ್ಲ. ಮುಸ್ತಾಫನಿಗೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ನೀಡಿ, ಹತ್ತು ಸಾವಿರ ಸಂಬಳ ನೀಡುವುದಾಗಿ ಡಾ. ರಾಧಾಕೃಷ್ಣ ಘೋಷಿಸಿದರು.
ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಯಲ್ಲಿ ನಿಕಟಪೂರ್ವ ಪ್ರಾಚಾರ್ಯ ಡಾ. ಮಹಾಲಿಂಗನಗೌಡ ಅವರ ಕಾರ್ಯದಕ್ಷತೆ, ಕಾರ್ಯಕ್ಷಮತೆ ಕಾರಣವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಮಂಜುನಾಥ ಮಾತನಾಡಿ, ಭಾರತರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರಿಂದ ರಚಿತವಾಗಿರುವ ಸಂವಿಧಾನ ದೇಶದ 130 ಕೋಟಿ ಜನರಿಗೂ ನ್ಯಾಯ, ಸಮಾನತೆ ಕಲ್ಪಿಸಿದೆ. ಮಹಿಳೆಯರು ಸ್ವಾವಲಂಬನೆ, ಸ್ವಾಭಿಮಾನದಿಂದ ಜೀವನ ಸಾಗಿಸಲು ಸಾಧ್ಯವಾಗಿರುವುದು, ಕಟ್ಟಕಡೆಯ ಮನುಷ್ಯ ಸಮಾನತೆ ಸಾಧಿಸುತ್ತಿರುವುದು ವಿಶ್ವದಲ್ಲೇ ಶ್ರೇಷ್ಠವೆಂದು ತಜ್ಞರಿಂದ ಪ್ರಶಂಸಿಸಿರುವ ಭಾರತದ ಸಂವಿಧಾನದಿಂದ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಭಡ್ತಿ ಮುಖ್ಯಗುರು ಮೆಹತಾಬ್ ಅವರು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ವಿದ್ಯಾಭ್ಯಾಸದ ಜತೆ ವಿವಿಧ ಕೌಶಲಗಳನ್ನು ಗಳಿಸಿಕೊಂಡರೆ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ. ಮೊಬೈಲ್ ಬಳಕೆ ಹಿಡಿತದಲ್ಲಿರಬೇಕು ಎಂದು ತಿಳಿಸಿದರು.
ಕಸಾಪ ಗ್ರಾಮೀಣ ಘಟಕದ ಅಧ್ಯಕ್ಷ ಎ.ಎರ್ರಿಸ್ವಾಮಿ , ಬಳಗದ ಉಪಾದ್ಯಕ್ಷ .ಸಲ್ಲ ಹನುಮಂತ ರೆಡ್ಡಿ, ಜಗದೀಶ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಬಿ.ಸುಲೇಖ ಅವರು ಮಾತನಾಡಿ ಪರಿಸರ ಉಳಿಸಿ ಬೆಳೆಸಬೇಕು ಎಂದರು. ಬಳಗದ ಸೆವೆನ್ ಹಿಲ್ಸ್ ಸೌಮ್ಯ ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಡಾ.ಪಿ.ರಾಧಾಕೃಷ್ಣ, ಮೆಹತಾಬ್, ಸಿ.ಮಂಜುನಾಥ್, ಚಂದ್ರಶೇಖರ ಆಚಾರ್, ಮಂಜುನಾಥ ಗೋವಿಂದವಾಡ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್ ಸ್ವಾಗತಿಸಿದರು. ವರ್ಣಶ್ರೀ ಪ್ರಶಸ್ತಿ ಪುರಸ್ಕೃತ , ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಉಪನ್ಯಾಸಕ ಚಾಂದಭಾಷ ನಿರೂಪಿಸಿದರು. ಉಪನ್ಯಾಸಕ ಡಾ. ಯು ಶ್ರೀನಿವಾಸಮೂರ್ತಿ ವಂದಿಸಿದರು.
ಗಾಯಕ ಜಡೇಶ ಎಮ್ಮಿಗನೂರು ಅವರ ಜಾನಪದ ಗಾಯನ ಗಮನ ಸೆಳೆಯಿತು.
*****