- ಚೂರಿಯಿಂದ ಇರಿಸಿಕೊಳ್ಳುವುದೇನು
ಸಲೀಸು ಬಿಡು,
ಇಲಾಜಿನ ಜರೂರಿಲ್ಲ
ಗಾಳಿಯೊಳಗೆ ಲೀನವಾಗಿ
ಬೂದಿಯ ಕೂಡ ಭಸ್ಮವಾಗಿ
ಮಣ್ಣೊಳಗೆ ಮಣ್ಣಾಗಿ
ಒಮ್ಮೆ ಚಿಗುರಿ ಹಸಿರಾಗುವ
ಅರಳಿ ರಂಗೇರುವ ಸಸಿಯ
ರಸದೊಳು ಐಕ್ಯವಾದೇನು,ಒಂದು ತೊಟ್ಟು ರಕ್ತ ಚೆಲ್ಲದೆ
ಮೈಯ್ಯ ಮೇಲೊಂದು
ಗೀರಿನ ಸಬೂತು ಉಳಿಸದೆ
ಬಗೆಬಗೆದು ಮೊಗೆಮೊಗೆದರು
ಕಾಣುದಷ್ಟು ಆಳಕ್ಕಿಳಿದ
ಎಳೆಯೊಂದರ
ಕೊಲೆಗಡುಕತನದ ಕರಾಮತ್ತು
ಎಂಥ ನಿಪುಣನ ಕೈಲೂ
ಬಂಧಿಯಾಗಿಲ್ಲ ನೋಡು…ಈ ಬಣ್ಣ ಬಯಲುಮಾಡುವ
ತಾಕತ್ತಿರುವುದು
ಎದೆಯ ಗೂಡಿಗೇ ಹೊರತು
ದೇವರಾಣೆಗೂ ಮೂರ್ನಾಲ್ಕು
ಪದಗಳ ಕೈಲಿ ಏನೂ ಆಗುವುದಿಲ್ಲ,
ನೋವ ಖೂನಿ ಮಾಡುವ
ಭಂಟತನ,
ದೀಪ ಆರಿಸಿದ ಉಸಿರಿನ ಹೊರತು
ಯಾವ ಪದ್ಯಕ್ಕೂ ಅಸಾಧ್ಯ -
-ಭುವನಾ ಹಿರೇಮಠ, ಕಿತ್ತೂರು, ಬೆಳಗಾವಿ
*****