ಅನುದಿನ ಕವನ-೭೦೪, ಕವಿ: ಹೊಸಪೇಟೆ ವಿಕ್ರಮ‌ ಬಿ.ಕೆ, ಬೆಂಗಳೂರು, ಕವನದ ಶೀರ್ಷಿಕೆ: ಸಾಲಗಾರ

ಸಾಲಗಾರ

ಒಳಗೆ ಕಾಡಿ ಬೇಡಿ
ಕಿರಿಚಿ ಪರಚಿ ಭಾವಲೋಕ
ಹೊಡೆದು ನಿಟ್ಟುಸಿರು ಬಿಡುವ ಕವನ
ಶಾಂತಿಯ ಸಾಲ ಕೊಡುವ ದಂಧೆ..

ಎಷ್ಟು ಕಾಲ ಪದಗಳಲ್ಲಿ
ಸೇರಿ ಇರುವುದು?
ಬಡ್ಡಿ ಹೆಚ್ಚು ಗಳಿಸುವ ಕಾತುರ
ಓದುವ ಕಣ್ಣುಗಳಿಗೆ ಕಾದು
ಮನಸಿನೊಳಗೆ ಜಿಗಿಯುತ್ತೆ;
ಹೊಸಲೋಕ ಸೃಷ್ಟಿಸುವ ಪರಿ
ಕವನ – ಬೇರೂರುತ್ತೆ!

ಓದುಗ ಬಡ್ಡಿ ಕಟ್ಟುವನು
ತನ್ನ ನೋವನ್ನು ಹಿಡಿದುಕೊಂಡ ಕವನಕ್ಕೆ
ಓದಿ ಓದಿ ಮತ್ತೆ ಓದಿ
ಕಣ್ಣೀರನ್ನು ಕಳೆದುಕೊಂಡು
ಖುಷಿಪಡುತ್ತಾನೆ !

ಅರಳುವ ಹೂವಿನ ನರಳುವಿಕೆಗೆ
ಸೋತ ಕವನದ ಬಗ್ಗೆ
ಪ್ರತೀ ಅಲೆಗಳ ಮುತ್ತಿಗೆ ಉತ್ತರ
ಕೊಡಲಾಗದ ಮರಳಿನ ವ್ಯಥೆಗೆ
ಅರ್ಥ ಹುಡುಕುವ ಬರದಲ್ಲಿ
ಅನುಭವ ಮರೆಯುವ ಓದುಗ
ಸಾಲಗಾರ !


-ಹೊಸಪೇಟೆ ವಿಕ್ರಮ‌ ಬಿ.ಕೆ, ಬೆಂಗಳೂರು
*****