ಚೆನ್ನೈ: ಚೆನ್ನೈ ಮಹಾನಗರದಲ್ಲಿರುವ ಟಿ ನಗರದ ರಾಮರಾವ್ ಕಲ್ಯಾಣ ಮಂಟಪದಲ್ಲಿ 49 ನೇ ಜಾನಪದ ಗೀತೆ ಗಾಯನ ಸ್ಪರ್ಧೆ ಅಂಗವಾಗಿ ಕನ್ನಡ ಬಳಗ ಆಯೋಜಿಸಲಾಗಿದ್ದ ಕಪ್ಪಣ್ಣ- 75 ಸಾಂಸ್ಕೃತಿಕ ಸಂಭ್ರಮ, ಜಾನಪದ ಮೇಳ ವಿಜೃಂಭಣೆಯಿಂದ ನಡೆಯಿತು.
ಕನ್ನಡ ಬಳಗದ ಹಿರಿಯ ರಂಗ ಕಲಾವಿದ, ಅಂತರಾಷ್ಟ್ರೀಯ ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ್ ಕಪ್ಪಣ್ಣ ಅವರ 75 ನೆಯ ಹುಟ್ಟು ಹಬ್ಬದ ಪ್ರಯುಕ್ತ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದಂಪತಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಪ್ಪಣ್ಣ ಅವರು, ಹೊರನಾಡಿನಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಕನ್ನಡ ಜಾನಪದ ಡಿಂಡಿಮವನ್ನು ಬಾರಿಸಬೇಕು ಎಂದು ಹೇಳಿದರು.
ಅಂತರಾಷ್ಟ್ರೀಯ ಜಾನಪದ ಕಲಾವಿದೆ, ಕರ್ನಾಟಕದ ಉಷಾ ಉತ್ತಪ್ಪ ಎಂದೇ ಖ್ಯಾತಿಯಾಗಿರುವ ಸವಿತಕ್ಕ ಹಾಗೂ ಅವರ ತಂಡ ಭರ್ಜರಿಯಾಗಿ ಜಾನಪದ ಸ್ಪರ್ಧೆಗೆ ಚಾಲನೆ ನೀಡಿದರು.
ಜಾನಪದ ಸ್ಪರ್ಧೆಯಲ್ಲಿ ಚೆನ್ನೈ ಕನ್ನಡ ಸಂಘಟನೆಗಳ ಯುವಕ ಯುವತಿಯರ ತಂಡ ಹಾಗೂ ಚಿಕ್ಕ ಮಕ್ಕಳ 75ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದ ವಿಶೇಷವೆಂದರೆ ಎನ್.ಎಲ್.ಸಿ ನೇವೆಲಿಯ ಕನ್ನಡ ಸಂಘದ ಜಾನಪದ ಹುಲಿ ಕೆಎಂ ಮಂಜುನಾಥ್ ಅವರ ನೇತೃತ್ವದಲ್ಲಿ ಸಾಹಿತಿ ಹಾಗೂ ಗಾಯಕ ಸಿಐಎಸ್ಎಫ್ ನ ಕುಮಾರಸ್ವಾಮಿ ಹಿರೇಮಠ , ಸಂಘದ ಅಧ್ಯಕ್ಷ ಕುಮಾರ, ಉಪಾಧ್ಯಕ್ಷ ನಾಗರತ್ನ, ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ್, ಸಂಘದ ಪದಾಧಿಕಾರಿಗಳು ಹಾಗೂ ಮಹಿಳಾ ತಂಡದವರು ಸೇರಿ ದಂತೆ 20 ಜನ ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
*****