ಚಿತ್ರದುರ್ಗ, ಡಿ.18: ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಅಂಗವಾಗಿ ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ಭಾನುವಾರ ಭವ್ಯ ಮೆರವಣಿಗೆ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಿತ್ರದುರ್ಗ ನಗರಸಭೆ ಸಹಯೋಗದಲ್ಲಿ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ಅಂಗವಾಗಿ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಲ್ಲಿ ಹಾವೇರಿ ಶಾಸಕ ಹಾಗೂ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಚ.ಓಲೇಕಾರ್, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ್ ಅವರು ಕಹಳೆ ಊದುವ ಮೂಲಕ ಒನಕೆ ಓಬವ್ವ ಜಯಂತಿ ಅದ್ದೂರಿಗೆ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು.
ವೀರ ವನಿತೆ ಒನಕೆ ಓಬವ್ವ, ಡಾ.ಬಿ.ಆರ್.ಅಂಬೇಡ್ಕರ್, ರಾಜವೀರ ಮದಕರಿ ನಾಯಕರ ಭಾವಚಿತ್ರಗಳನ್ನು ಪುಷ್ಪಾಲಂಕೃತ ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ವೀರ ವನಿತೆ ಒನಕೆ ಓಬವ್ವ ವೇಷಭೂಷಣ ಧರಿಸಿದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಮನ ಸೆಳೆದರು.
ಜಾನಪದ ಕಲಾತಂಡಗಳ ಮೆರಗು: ಮೆರವಣಿಗೆ ಉದ್ದಕ್ಕೂ ಕಹಳೆ, ಡೊಳ್ಳು ಕುಣಿತ, ಉರುಮೆ, ಮಹಿಳಾ ಉರುಮೆ, ಬ್ಯಾಂಡ್ ವಾದ್ಯಗಳು, ಮಹಿಳಾ ಡೊಳ್ಳು ಕುಣಿತ, ತ್ರಾಷ ವಾದ್ಯ, ಖಾಸಾ ಬೇಡರ ಪಡೆ, ಪೂಜಾ ಕುಣಿತ, ಚಿಲಿಪಿಲಿ ಗೊಂಬೆ, ಪಟಾ ಕುಣಿತ, ಹುಲಿವೇಷ, ಹಗಲು ವೇಷ, ನಂದಿಕೋಲು, ಗಾರುಡಿ ಗೊಂಬೆ, ಕೀಲುಕುದುರೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಜಯಂತಿ ಅಂಗವಾಗಿ ನಗರದ ಕನಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿವೃತ್ತ, ಒನಕೆ ಓಬವ್ವ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಮದಕರಿ ನಾಯಕರ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳನ್ನು ಹಾಗೂ ಕನಕದಾಸರು, ಸಂಗೋಳ್ಳಿ ರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ, ಮದಕರಿ ನಾಯಕರ ಪುತ್ಥಳಿ ಸೇರಿದಂತೆ ನಗರದ ಪ್ರಮುಖ ರಸ್ತೆಯಲ್ಲಿರುವ ಎಲ್ಲ ಮಹನೀಯರ ಪುತ್ಥಳಿಗಳಿಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ, ವಿಶೇಷವಾಗಿ ಅಲಂಕರಿಸಲಾಗಿತ್ತು.
ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯು ಗಾಂಧಿವೃತ್ತ, ಎಸ್ಬಿಐ ವೃತ್ತ, ಪ್ರವಾಸಿ ಮಂದಿರದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತ, ಮದಕರಿ ವೃತ್ತದ ಮೂಲಕ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಮುರುಘರಾಜೇಂದ್ರ ಕ್ರೀಡಾಂಗಣದವರೆಗೆ ನಡೆದು, ಸಮಾಪನೆಗೊಂಡಿತು.
ಮೆರವಣಿಗೆಯಲ್ಲಿ ಚಿತ್ರದುರ್ಗ ಛಲವಾದಿ ಮಹಾಸಂಸ್ಥಾನ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ರಾಜ್ಯಮಟ್ಟದ ಒನಕೆ ಜಯಂತಿ ಸಮಿತಿಯ ರಾಜ್ಯ ಕಾರ್ಯದರ್ಶಿ ನಿರಂಜನಮೂರ್ತಿ ಸೇರಿದಂತೆ ಛಲವಾದಿ ಸಮುದಾಯ ಮುಖಂಡರು ಇದ್ದರು.
*****