ಸಂಡೂರು, ಡಿ.20: ನಾಡೋಜ ದರೋಜಿ ಈರಮ್ಮ ಸ್ಮಾರಕ ದಕ್ಷಿಣ ಭಾರತದ ಬುಡಕಟ್ಟು, ಅಲೆಮಾರಿ ಸಮುದಾಯಗಳ ಶಕ್ತಿ ಕೇಂದ್ರವಾಗಿ ಸರಕಾರ ಅಭಿವೃದ್ಧಿ ಪಡಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ಒತ್ತಾಯಿಸಿದರು.
ಹಳೇದರೋಜಿಯ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತಾಲೂಕಿನಹೊಸ ದರೋಜಿ ಪ್ರೌಢಶಾಲಾ ಆವರಣದಲ್ಲಿ ಜರುಗಿದ ಬುಡಕಟ್ಟು ಜಾನಪದ ಉತ್ಸವ ಉದ್ಘಾಟಿಸಿ ಅವರು ಮಾತಮಾಡಿದರು.
ಶಾಸಕರು, ಸಚಿವರು, ಸಂಸದರು ಭರವಸೆ ನೀಡಿರುವಂತೆ ಸ್ಮಾರಕ ಅಭಿವೃದ್ಧಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ, ಕೇಂದ್ರ ಸರಕಾರಗಳು ತಕ್ಷಣ ಅಗತ್ಯ ಆರ್ಥಿಕ ನೆರವು ನೀಡುವ ಮೂಲಕ ಸ್ಮಾರಕವನ್ನು ಅಭಿವೃದ್ಧಿ ಪಡಿಸಿಬೇಕು ಎಂದರು.
ಆಧುನಿಕ ಭರಾಟೆಯಲ್ಲಿ ಅಲೆಮಾರಿ, ಬುಡಕಟ್ಟು ಕಲೆಗಳು ಅಳಿವಿನಂಚಿನಲ್ಲಿವೆ. ಈ ಕಲೆಗಳ ಪುನಶ್ಚೇತನ, ಪ್ರೋತ್ಸಾಹಕ್ಕಾಗಿ ಪ್ರತ್ಯೇಕ ಅಲೆಮಾರಿ ಬುಡಕಟ್ಟು ಕಲಾ ಅಕಾಡೆಮಿ ಆರಂಭಿಸಬೇಕು ಎಂದು ಮಂಜುನಾಥ ಮನವಿ ಮಾಡಿದರು.
ಬರುವ ಬಳ್ಳಾರಿ, ಹಂಪಿ ಉತ್ದವಗಳಲ್ಲಿ ಈ ಸಮುದಾಯಗಳ ಕಲೆಗಳ ಪ್ರದರ್ಶನಕ್ಕಾಗಿ ಪ್ರತ್ಯೇಕ ವೇದಿಕೆ ನಿರ್ಮಿಸಬೇಕು ಎಂದರು.
ಮುಖ್ಯ ಅತಿಥಿ ಬಳ್ಳಾರಿ ಡಯಟ್ ಸಂಸ್ಥೆಯ ಉಪನ್ಯಾಸಕ ರೇವಣಸಿದ್ದಪ್ಪ ಅವರು ಮಾತನಾಡಿದರು.
ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಗಲುವೇಷದ ಹಿರಿಯ ಕಲಾವಿದರಾದ ಅಶ್ವ ರಾಮಣ್ಣ, ಬುರ್ರಕಥಾ ಶಿವಮ್ಮ ಇದ್ದರು,
ಅಧ್ಯಕ್ಷತೆವಹಿಸಿದ್ದ ಶಾಲಾ ಮುಖ್ಯೋಪಾಧ್ಯಯಿನಿ ಶ್ರೀಮತಿ ಉಲ್ಲೇಶಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸುಧಾ, ಜ್ಯೊತಿ ಗುರಿಕಾರ್, ಮಹಾದೇವಿ, ಶಿರೀನ್ , ಹಿರಿಯ ಕಲಾವಿದ ದೊಡ್ಡ ಲಾಲಪ್ಪ, ಜಿ ವೀರೇಶ, ಯುವ ಕಲಾವಿದ ಅಶ್ವ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರದರ್ಶನ: ಪಾರ್ವತಮ್ಮ ಮತ್ತು ತಂಡದವರಿಂದ ಬುರ್ರಕಥಾ, ಮಾರೆಮ್ಮ ಮತ್ತು ತಂಡದವರಿಂದ ಗಂಗಿಗೌರಿ ಗಾಯನ, ಅಶ್ವ ರಾಮಣ್ಣ ಮತ್ತು ಸಂಗಡಿಗರಿಂದ ಜಾನಪದ ಗಾಯನ, ಪಂಪಣ್ಣ ಮತ್ತು ತಂಡದವರಿಂದ ಡೊಳ್ಳು ಕುಣಿತ, ದೊಡ್ಡ ಹನುಮಯ್ಯ ಮತ್ತು ತಂಡದವರಿಂದ ಗೊರವರ ಕುಣಿತ, ಬಳ್ಳಾರಿಯ ರೇಣುಕಾ ಮತ್ತು ತಂಡದವರಿಂದ ಬುಡಕಟ್ಟು ಹಕ್ಕಿಪಿಕ್ಕಿ ನೃತ್ಯ, ಮೋಹನ್ ಮತ್ತು ತಂಡದವರಿಂದ ತಾಷರಾಂ ಡೊಲ್, ಸೋಮಶೇಖರ ಮತ್ತು ತಂಡದವರ ಪೋಟಿವೇಷ ಪ್ರದರ್ಶನ ಸಭಿಕರನ್ನು ರೋಮಾಂಚನ ಗೊಳಿಸಿತು.
ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಅಧ್ಯಕ್ಷರಾದ ಡಾ ವಿ ರಾಮಾಂಜನೇಯ (ಅಶ್ವ ರಾಮು) ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಶಿಕ್ಷಕಿ ಪ್ರೇಮಾ ಎಂ ಕುಲಕರ್ಣಿ ಅವರು ಪ್ರಾರ್ಥಿಸಿದರು. ಅಧ್ಯಾಪಕ ಪರಶುರಾಮ ಪವಾರ್ ನಿರೂಪಿಸಿದರು. ಶಿಕ್ಷಕ ಪರಸಪ್ಪ ವಂದಿಸಿದರು.
*****