ಜಾನಪದ ಸಾಹಿತ್ಯ ಎಲ್ಲಾ ಸಾಹಿತ್ಯಗಳ ತಾಯಿಬೇರು -ಡಾ. ಗಂಗಾಧರ ದೈವಜ್ಞ

ಬಳ್ಳಾರಿ, ಡಿ.27: ಜಾನಪದ ಸಾಹಿತ್ಯ ಎಲ್ಲಾ ಸಾಹಿತ್ಯಗಳಿಗೆ ತಾಯಿಬೇರು. ಇಂದು ಬರಬಾರದ ರೋಗ ರುಜಿನಗಳಿಗೆ ಬಲಿಯಾಗುತ್ತಿದ್ದೇವೆ. ಹಾಗಾಗಿ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಗಂಗಾಧರ ದೈವಜ್ಞ ಅವರು ಹೇಳಿದರು.

ಹಳೇದರೋಜಿಯ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ‌ ಜಿಲ್ಲೆಯ ಕಂಪ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ನಮ್ಮ ನೆಲ, ನಮ್ಮ ಸಂಸ್ಕೃತಿ ಎಂಬ ವಿಚಾರ ಸಂಕಿರಣ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಸಾಹಿತ್ಯ, ಜೀವಂತ ಪಳೆಯುಳಿಕೆ. ಟಿವಿ, ಮೊಬೈಲ್ ಮಾಧ್ಯಮಗಳಿಗಿಂತ ಪಾರಂಪರಿಕ ಜನಪದ ಕಲೆಗಳು ಜನಸಾಮಾನ್ಯರಿಗೆ ತಿಳುವಳಿಕೆ ಮತ್ತು ಜ್ಞಾನ ನೀಡುತ್ತವೆ ಎಂದು ತಿಳಿಸಿದರು.


ನಮ್ಮ ನೆಲ, ನಮ್ಮ ಸಂಸ್ಕೃತಿಯನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ನಾವು ವಿಫಲವಾಗಿರುವದರಿಂದ ಹಲವು ಸಂಕಷ್ಟಗಳನ್ನು ಎದುರಿಸಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಫೌಂಡೇಶನ್ ಅಧ್ಯಕ್ಷ ಡಾ ವಿ ರಾಮಾಂಜನೇಯ (ಅಶ್ವ ರಾಮು) ಅವರು ಸಂಸ್ಥೆಯು ನಡೆದು ಬಂದ ಹಾದಿ ಮತ್ತು ಕಾರ್ಯಕ್ರಮದ ಉದ್ದೇಶಗಳನ್ನು ಹೇಳಿದರು.
ವಿಶೇಷ ಆಹ್ವಾನಿತ ಕೆ ಎಂ ಹೇಮಯ್ಯ ಸ್ವಾಮಿ ಅವರು ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಜಾನಪದದ ಮಹತ್ವ ಮತ್ತು ಜ್ಞಾನ ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.


ಜಾನಪದ ಸಾಹಿತ್ಯದ ಮಹತ್ವದ ಕುರಿತು ಬಳ್ಳಾರಿ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಶಫಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಪತ್ರಕರ್ತ ಬಂಗಿ ದೊಡ್ಡ ಮಂಜುನಾಥ, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕಾರ್ಯಕಾರಿ‌ಸಮಿತಿ ಸದಸ್ಯ ಶಿಕಾರಿ ರಾಮು, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಗಲುವೇಷ ಹಿರಿಯ ಕಲಾವಿದ ಅಶ್ವರಾಮಣ್ಣ,
ಯುವ ಜಾನಪದ ಕಲಾವಿದ ಅಶ್ವ ಸುರೇಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸುಮಿತ್ರಾ, ಶ್ರೀ ದೇವಿ, ಮಹಾಲಕ್ಷ್ಮಿ ಪ್ರಾರ್ಥಿಸಿದರು. , ಉಪನ್ಯಾಸಕ ರಾಮು ಅವರು ನಿರೂಪಿಸಿದರು. ಡಾ ಎಂ ಆರ್ ವಾಗೀಶ
ಅವರು ವಂದಿಸಿದರು.
ಹೊಸಪೇಟೆಯ ಜಾನಪದ ಗಾಯಕ ಯಲ್ಲಪ್ಪ ಬಂಡಾರಕರ್ ಮತ್ತು ತಂಡದವರಿಂದ
ಜಾನಪದ ಗಾಯನ, ಶ್ರೀನಿವಾಸ್ ನಾಸಿಕ್ ಡೊಲ್ ತಂಡದವರಿಂದ ತಾಷ ರಾಂ ಡೊಲ್ ಪ್ರದರ್ಶನ ಗಮನ ಸೆಳೆಯಿತು.
*****