ಅನುದಿನ‌ ಕವನ-೭೩೦, ಕವಿ:ಉಗಮ ಶ್ರೀನಿವಾಸ್, ತುಮಕೂರು, ಕವನದ ಶೀರ್ಷಿಕೆ:ಅಷ್ಟು ಸುಲಭಕ್ಕೆ ದಕ್ಕುವನೇ ಬುದ್ದ!

ಅನುದಿನ ಕವನ ಕಾಲಂ ಆರಂಭವಾಗಿ ಇಂದಿಗೆ ಎರಡು ವರ್ಷಗಳಾದವು ಎಂದು ತಿಳಿಸಲು ಹರ್ಷಿಸುತ್ತೇನೆ. ಹಿರಿಯ ಕವಿ ಟಿ ಕೆ ಗಂಗಾಧರ ಪತ್ತಾರ ಅವರ ‘ಹೊಸವರ್ಷದ ಹಾಡು’ ಕವಿತೆ ಮೂಲಕ 01-01-2021ರಂದು ಆರಂಭವಾದ ಕಾವ್ಯ ಪಯಣ ಇಂದಿಗೆ(31-12-2022) 730 ದಿನಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಹೆಮ್ಮೆಯೇ ಸರಿ! ಈ ಸಂಭ್ರಮಕ್ಕೆ ಕಾರಣವಾಗಿರುವ ಎಲ್ಲಾ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿಗಳು, ಕವಯಿತ್ರಿಯರಿಗೆ, ಪ್ರತಿದಿನವೂ ಕವಿತೆಗಳನ್ನು ಓದಿ ಉತ್ತೇಜಿಸುತ್ತಿರುವ ಕಾವ್ಯ ಪ್ರಿಯರಿಗೆ, ಕರ್ನಾಟಕ ಕಹಳೆ ಡಾಟ್ ಕಾಮ್ ಗೌರವ-ಪ್ರೀತಿಪೂರ್ವಕ ಧನ್ಯವಾದಗಳನ್ನು ತಿಳಿಸುತ್ತದೆ. ಮುಂದಿನ ದಿನಗಳಲ್ಲೂ ಇದೇ ಪ್ರೋತ್ಸಾಹ, ಸಹಕಾರ ಬೆಂಬಲ ಇರಲಿ🙏🌺
(ಸಂಪಾದಕರು)

ಅಷ್ಟು ಸುಲಭಕ್ಕೆ ದಕ್ಕುವನೇ ಬುದ್ದ!

ಜಾವ ಐದರ ಇರುಳು
ಬೆಳಕು ಮುಕ್ಕಳಿಸುವ ಹೊತ್ತು
ಲುಂಬಿನಿವನದ ವೖಕ್ಷ ಸ್ಥಳದಲ್ಲಿ
ಬುದ್ದನ ಕನಲಿಕೆ

ಕಣ್ಣ ಪಸೆಯ ನೀರು
ಒರೆಸಿಕೊಂಡು ಪಾದ ಊರುವ
ಆತುರದಲ್ಲಿ ಗಡಿ ದಾಟುವ ನೆನಕೆ

ನಾರಾಯಣ ನದಿಯ ನೆತ್ತಿಯ
ಮನೋಕಾಮನ ದೇಗುಲ ಹತ್ತಿ
ಬೆನ್ನು ತಿರುಗಿಸುವಾಗ
ಸುಮ್ಮನೆ ಮಾಯವಾದರು ಬೌದ್ದ ಬಿಕ್ಕುಗಳು

ಅಂಗಾತ ಮಲಗಿದ ಕಪ್ಪು ಶಿಲೆಯ
ಸ್ವಯಂ ಬುದ್ದನ ಪಕ್ಕದಲ್ಲೇ
ಬಿಕರಿಗಿದ್ದ ಬುದ್ದ ಸೂತ್ರದ ಸುರಳಿಕೊಳ್ಳಲು
ಪಾಕೆಟ್ಟಿನಲ್ಲಿತ್ತು
ಚಲಾವಣೆಗೊಳದ ನೋಟುಗಳು

ಬುದ್ದ ಸ್ತೂಪ ತೋರಿಸುತ್ತೇನೆಂದ
ಸಶಸ್ತ್ರಧಾರಿ ಸಂತನೊಬ್ಬ
ಸದ್ದಿಲ್ಲದೆ `ಸರಯೂ’ ನದಿಯ
ದಂಡೆ ಮೇಲೆ ಕೂರಿಸಿಬಿಟ್ಟ

ಬುದ್ದ ಪಾದ ಅಡ್ಡಾಡಿದ
ರಾಜಬೀದಿಯ ಪಕ್ಕದಲ್ಲಿ ತಲೆ ಎತ್ತಿದ್ದ
ಮಂದಿರದ ಅಂಗಳದಲ್ಲಿ ಉಳ್ಳವನೊಬ್ಬ
ತನ್ನ ದೇಹವನ್ನು ಅಘೋರಿಗಳ
ಬಾಯಿಗೆ ಉಯಿಲು ಬರೆದಿದ್ದ

ಗಡಿಯಲ್ಲಿ, ನದಿಯಲ್ಲಿ, ಗುಡ್ಡದಲ್ಲಿ
ಬೆನ್ನಲ್ಲಿ, ನಿಮ್ಮಲ್ಲಿ, ನನ್ನಲ್ಲಿ ಎಲ್ಲೆಲ್ಲೂ
ಇರುವ ಬುದ್ದನನ್ನು
ದಕ್ಕಿಸಿಕೊಳ್ಳಲು ರಾತ್ರಿಯಾಗದ ಇರುಳಿನಲ್ಲಿ
ನಡೆದಾಡುತ್ತಲೇ ಇದ್ದೇನೆ.


– ಉಗಮ ಶ್ರೀನಿವಾಸ್, ತುಮಕೂರು
*****