ಕವನ ಮಾರಾಟಕ್ಕಿದೆ
ಕನಸುಗಳ ಮೂಟೆ ಕಟ್ಟಿ
ಎಲ್ಲೋ ಮರೆತುಬಂದವನು
ಅವಳ ಓಲೈಸಲು
ಇಲ್ಲೆಲ್ಲೋ ಕವನ ಮಾರಾಟಕ್ಕೆ
ಇರಬಹುದೆಂದು ಖರೀದಿಸ ಹೊರಟ
ನವರತ್ನಗಳ ಮಾಲೆ ಆಗಬಹುದೇ ಗೆಳತಿ
ಸೋತು ಮಂಡಿಯೂರಿದ
ಪದ ಗುಚ್ಛಗಳನ್ನೇ ಮುತ್ತಿನ ಮಾಲೆಯಂತೆ
ಪೋಣಿಸಿ ತರಬಾರದೇ
ಎಂದಾಳಾ ಚಲುವೆ
ಬಟ್ಟಲ ಕಂಗಳಲ್ಲಿ ನೀರುತುಂಬಿ
ಬೊಗಸೆ ಹಿಡಿದು ನಿಂತ
ಸ್ವಾತಿ ಮುತ್ತಿನಂತೆ ಉದುರಿದ
ಕಣ್ಣ ಹನಿಗಳು ಹಸ್ತ ರೇಖೆಗಳ
ಸ್ಪರ್ಶಿಸುತಿರೆ ದಂಗಾದ
ಆ ರೇಖೆಗಳ ಪಥವ
ಅರ್ಥೈಸಿಕೊಂಡವನಂತೆ
ಇಬ್ಬನಿಯು ತಬ್ಬುಗೆಯ
ಮೇಘವು ಮುತ್ತುಗಳ
ಕಡಲು ಕನಸುಗಳ
ಬೆಳಕು ಬದುಕನ್ನ
ಅವನಿಗೆ ಉದಾರಿಸಿದೆ
ಅವನ್ನೇ ಕಾವ್ಯವಾಗಿಸಿ
ಮತ್ತೊಮ್ಮೆ ಮಂಡಿಯೂರಿದ್ದಾನೆ
ಸ್ವೀಕರಿಸ ಬೇಕಾದವಳೇ
ಇಲ್ಲವಾಗಿದ್ದಾಳೆ
ಶತಮಾನದ ಕಾವ್ಯವೀಗ
ಅವನಲ್ಲೇ ಉಳಿದುಹೋಗಿದೆ
ಅದೀಗ ಮಾರಾಟಕ್ಕಿದೆ
-ಡಾ. ಸಿ. ನಂದಿನಿ (ನಂದಿನಿ ವೀರು), ಬೆಂಗಳೂರು
*****