ಅನುದಿನ‌ ಕವನ-೭೩೭, ಕವಯಿತ್ರಿ: ರಂಹೊ(ರಂಗಮ್ಮ ಹೊದೇಕಲ್), ತುಮಕೂರು, ಕವನದ ಶೀರ್ಷಿಕೆ: ಮಾತಂದ್ರೆ….

ಮಾತಂದ್ರೆ….

ಮಾತಂದ್ರೆ ಬರಿಯ ಮಾತಲ್ಲ
ಮಾತನ್ನು ಎಲ್ಲರಿಗೂ ಕೊಡಲಾಗುವುದಿಲ್ಲ!

ಹಸಿವಂದ್ರೆ ಅನ್ನದ್ದಷ್ಟೇ ಅಲ್ಲ
ಮಾತೂ ಹುಟ್ಟಿಸುವ ಹಸಿವಿಗೆ ಲೆಕ್ಕವಿಲ್ಲ!

ಕತ್ತಲು ಅಂದ್ರೆ ಕಾಣದಿರುವುದಷ್ಟೇ ಅಲ್ಲ
ಮಾತೂ ಬೆಳಕು.!ಅಲ್ಲಗಳೆಯುವುದಾಗುವುದಿಲ್ಲ!

ಮಾತು ಅಂದ್ರೆ ನೆಪವಲ್ಲ
ಮಾತೂ ‘ಕನ್ನಡಿ’ ಅಂದ್ರೆ ಸುಳ್ಳಲ್ಲ!

ಮಾತು ಕಟ್ಟುವ ಮಂಟಪವಲ್ಲ
ಚದುರಿಬಿದ್ದ ಕನಸ ಎತ್ತಿ ಕಟ್ಟಬಹುದಲ್ಲ!

ಇಷ್ಟೇ..
ಮಾತಂದ್ರೆ ಬರಿಯ ಮಾತಲ್ಲ!
ಜೀವ-ಜೀವದ ತಂತೂ ಆಗಬಹುದಲ್ಲ!

-ರಂಗಮ್ಮ ಹೊದೇಕಲ್(ರಂಹೊ)
ತುಮಕೂರು