ಮೌಲ್ಯವನ್ನು ಸರಳವಾಗಿ ಅರ್ಥೈಸುವ ಶಕ್ತಿ ಜಾನಪದಕ್ಕಿದೆ -ಡಾ.ಚಲುವರಾಜು

ಬಳ್ಳಾರಿ, ಜ.12: ಮೌಲ್ಯವನ್ನು ಸರಳವಾಗಿ ಅರ್ಥೈಸುವ ಶಕ್ತಿ ಜಾನಪದಕ್ಕಿದೆ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಚಲುವರಾಜು ಅವರು ಹೇಳಿದರು.
ನಗರದ ವೀರಶೈವ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು,  ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಜಾನಪದ ಸಂಕ್ರಾಂತಿ ಉತ್ಸವ, ಜಾನಪದ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಜಾನಪದ ಮೌಲ್ಯಗಳು ಮತ್ತು ಲೋಕದೃಷ್ಠಿ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಉತ್ತಮ ಬದುಕು ರೂಪಿಸಿಕೊಳ್ಳಲು ಜಾನಪದ ಮಾರ್ಗದರ್ಶನ ನೀಡುತ್ತದೆ. ಸಾಮರಸ್ಯದ ಮಹತ್ವವನ್ನು ಸಾರುತ್ತದೆ ಎಂದರು.
ಜನಪದದಿಂದ ಬೆಳೆದು ಬಂದ ಜ್ಞಾನವೇ ವಿಜ್ಞಾನ. ಜಾನಪದವನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸ ಬೇಕು ಎಂದು ತಿಳಿಸಿದರು.


ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ವಿದ್ಯಾರ್ಥಿ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೇ ಶ್ರೀಮಂತ ಭಾರತೀಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಾನಪದ ಪರಿಷತ್ತು ಮತ್ತು ವೀರಶೈವ ಪಿಯು ಕಾಲೇಜು ಸಹಯೋಗದಲ್ಲಿ ಜಾನಪದ ಸಂಕ್ರಾಂತಿ ಉತ್ಸವವನ್ನು ಆಯೋಜಿಸುವ ಮೂಲಕ ಮುಂದಿನ‌ ತಲೆಮಾರಿಗೆ ಜನಪದ ಕಲೆಗಳನ್ನು ಪರಿಚಯಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅವಿಭಜಿತ ಬಳ್ಳಾರಿ ಯಲ್ಲಿ ವೀವಿ ಸಂಘ ಕಡಿಮೆ ಶುಲ್ಕ ಪಡೆದು ಶಿಕ್ಷಣ ನೀಡುತ್ತಿರುವುದು ಶ್ಲಾಘಿಸಿದ ಶಾಸಕರು ವೀರಶೈವ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದ ದಿನಗಳನ್ನು ಮೆಲುಕು ಹಾಕಿದರು.
ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ನೀಡುತ್ತಿರುವ ವೀವಿ ಸಂಘಕ್ಕೆ ಬಸವೇಶ್ವರ ನಗರದಲ್ಲಿ 18 ಎಕರೆ ಭೂಮಿ‌ ಸರಕಾರದಿಂದ ಮಂಜೂರು ಮಾಡಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕಂಪ್ಲಿ ಶಾಸಕ‌ ಜೆ ಎನ್ ಗಣೇಶ್ ಅವರು ಮಾತನಾಡಿ ಶ್ರೀಮಂತ ಕಲೆ ಪರಂಪರೆ ನಮ್ಮದು. ಪ್ರತಿಯೊಬ್ಬರೂ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಯುವ ಜನತೆ ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುವ ಬದಲು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಮಂಜುನಾಥ ಅವರು ಮಾತನಾಡಿ, ಕರ್ನಾಟಕ ಜಾನಪದ ಪರಂಪರೆಯ ಸಂರಕ್ಷಣೆ, ಸಂವರ್ಧನೆಗಾಗಿ ಪರಿಷತ್ತು ಸ್ಥಾಪನೆಗೊಂಡಿದೆ. ನೈಜ ಜನಪದ ಕಲೆಯ ಉಳಿವಿಗಾಗಿ ನಾಡೋಜ ಡಾ.‌ಹೆಚ್ ಎಲ್ ನಾಗೇಗೌಡರು ಪರಿಷತ್ತನ್ನು ಸ್ಥಾಪಿಸಿದರು. ಇಡೀ‌ಜೀವನವನ್ನು ಜಾನಪದದ ಬಗ್ಗೆ ಜಾಗೃತಿ ಮೂಡಿಸಿದರು ಎಂದು ಹೇಳಿದರು.


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ವೀವಿ ಸಂಘದ ಅಧ್ಯಕ್ಷ ಹೆಚ್ ಎಂ ಗುರುಸಿದ್ಧಸ್ವಾಮಿ,
ಜಿಪಂ‌ ಮಾಜಿ ಸದಸ್ಯ ಅಲ್ಲಂ ಪ್ರಶಾಂತ್ ಮಾತನಾಡಿದರು ಹನಸಿ-ಉತ್ತಂಗಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ದರೂರು ಶಾಂತನಗೌಡ, ಗದ್ದಿಕೆರೆ ಶ್ರೀ ಚರಂತೇಶ್ವರ ಸ್ವಾಮೀಜಿ, ವೀವಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್. ಮಲ್ಲನಗೌಡ, ಕಪ್ಪಗಲ್ಲು ಗಿರಿಜಾ, ಎಂ. ಕಾತ್ಯಾಯಿನಿ ಮರಿದೇವಯ್ಯ ಸೇರಿದಂತೆ ಹಲವು ಗಣ್ಯರು, ವೀರಶೈವ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಸುಜಯೀಂದ್ರ ಗೌತಮ್, ವೀರಶೈವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ, ಕೆ.ಸಿ ಸಜ್ಜನ್, ಆಡಳಿತ ಮಂಡಳಿ ಸದಸ್ಯರಾದ ಎಸ್.ಬಿ ವೀರನಗೌಡ, ಸಿದ್ಮಲ್ ಮಂಜುನಾಥ್, ಬಜ್ಜಪ್ಪನವರ ಅಮರೇಶ್, ವೀರೇಶ್ ಗಂಗಾವತಿ, ಕರೇಗೌಡರು ಮತ್ತು ಡಿ.ವಿಶ್ವನಾಥ್ ಉಪಸ್ಥಿತರಿದ್ದರು.


ಜಾನಪದ ರತ್ನ ಪ್ರಶಸ್ತಿ ಪ್ತದಾನ: ಜಾನಪದ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸಿದ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಜಿ.ಶಿವೆಶ್ವರ ಗೌಡ ಕಲ್ಲುಕಂಬ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಳೇ ದರೋಜಿ ಅಶ್ವರಾಮಣ್ಣ, ಕುರುಗೋಡು ತಾಲೂಕಿನ ಬಸಾಪುರ ಗ್ರಾಮದ ಜಾನಪದ ಗಾಯಕಿ ಬಸಾಫುರ ಹುಲಿಗೆಮ್ಮ, ಕಂಪ್ಲಿಯ ಸಿಂದೋಳ್ ಕುಣಿತ ಕಲಾವಿದ ರಾಹುಳ್ ನಾಗಪ್ಪ, ಸಿರುಗುಪ್ಪದ ತತ್ವಪದಕಾರ ದಳವಾಯಿ ಈರಣ್ಣ ಮತ್ತು ಜಾನಪದ ಯುವ ಗಾಯಕ ಚಿಗುರು ಕಲಾ ತಂಡದ ಎಸ್ ಎಂ‌ ಹುಲುಗಪ್ಪ ಅವರಿಗೆ ಗಣ್ಯರು ಜಾನಪದ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.


ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಅವರ ಜಯಂತೋತ್ಸವ ಹಿನ್ನಲೆಯಲ್ಲಿ ಗಣ್ಯರು ಭಾವಚಿತ್ರಕ್ಕೆ ಪುಷ್ಪಾರ್ಪಿಸಿ ಗೌರವ ಸಲ್ಲಿಸಿದರು.
ಪರಿಷತ್ತು ಸಂಘಟನಾ ಕಾರ್ಯದರ್ಶಿ ಹೇಮಾ ಮಂಜುನಾಥ ಸ್ವಾಗತಿಸಿದರು. ಸಹಾಯಕ‌ ಪ್ರಾಧ್ಯಾಪಕ ರಾದ ಪ್ರೊ. ಮನೋಹರ, ಪ್ರೊ. ಅಲಂ ಭಾಷ ನಿರೂಪಿಸಿದರು. ಪರಿಷತ್ತು ಪ್ರಧಾನ ಕಾರ್ಯದರ್ಶಿ ಡಾ.ಅಶ್ವರಾಮು ಅವರು ವಂದಿಸಿದರು.ಎಸ್ ಎಂ ಹುಲುಗಪ್ಪ ಮತ್ತು ತಂಡ ನಾಡಗೀತೆ, ರೈತಗೀತೆ ಪ್ರಸ್ತುತ ಪಡಿಸಿದರು.
ಯುವ ಪ್ರತಿಭೆ ಪ್ರಕೃತಿ ರೆಡ್ಡಿ ಹಾಡಿದರು. ಕಾಲೇಜಿನ ವಿದ್ಯಾರ್ಥಿಗಳು ಸುಗ್ಗಿ ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ‌ ಮೂಲಕ ರಂಜಿಸಿದರು
******