ಕವಿತೆಯ ಮೊದಲ ಸಾಲು…
ನೋಟ್-ಪ್ಯಾಡ್ ತೆರೆದಿಟ್ಟು-
ಕಾಯುತ್ತ ಕುಳಿತೆ ಇಡೀ ಎರಡು ಹಗಲು ಒಂದು ಇರುಳು,
ಮನಸ್ಸು ಖಾಲಿಖಾಲಿ.
ಒಂದೇ ಒಂದು ಪದ
ಒಡಮೂಡಲಿಲ್ಲ
ಅವಳ ಉದ್ದನೆಯ ಕಪ್ಪುಕೂದಲ ನೆರಳು
ಇರುಳಾಗಿ ಕಾಡುತ್ತಿತ್ತು.
ಕೃತಕ ಬೆಳಕಿನಬ್ಬರಕ್ಕೆ
ಆಗಸದಲ್ಲಿ
ಮಿನುಗುವ ನಕ್ಷತ್ರ ಕಾಣಲಿಲ್ಲ, ಒಂದೇ
ಒಂದು ಸಾಲು ಮೂಡಲಿಲ್ಲ.
ಕಂಪ್ಯೂಟರ್ ಪರದೆ
ಅಣಕಿಸುತ್ತಿತ್ತು
ಅವಳಿಗೆ ಕೇಳಿದೆ, ಆಗಬಾರದೇ ನೀನು
ನನ್ನ ಕವಿತೆಯ ಮೊದಲ ಸಾಲು.
ಅವಳು ಮುಗುಳ್ನಕ್ಕು
ಹೇಳಿದಳು,
‘ಒಂದೇ ಒಂದು ಷರತ್ತು, ನೀನು ಯಾವಾಗಲೂ
ನನ್ನ ಜೊತೆಯೇ ಇರಬೇಕು.’
ಮುಂಜಾನೆ ನಾನು
ಮತ್ತು ಅವಳು
ಅಡುಗೆ ಮನೆಯಲ್ಲಿ ಬಿಸಿ-ಬಿಸಿ ಕಾಫಿ
ಕುಡಿಯುತ್ತಿದ್ದೇವೆ…
ಯಾರೋ ಕಿವಿಯಲ್ಲಿ
ಒಳ್ಳೇ ಹುಡುಗ ಅಂದದ್ದು ನಿಮಗೂ ಕೇಳಿಸಿತೆ?
-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
*****