ಬಳ್ಳಾರಿ, ಜ.18: ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಸಹಕಾರಿಯಾಗಲಿದೆ ಎಂದು
ಡಿವೈಎಸ್ಪಿ ಸತ್ಯನಾರಾಯಣ ಅವರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಳ್ಳಾರಿ ಪೂರ್ವ ವಲಯ, ಪಿಡಿ ಹಳ್ಳಿ ಠಾಣೆ, ಸನ್ಮಾರ್ಗ ಗೆಳೆಯರ ಬಳಗ ಹಾಗೂ ವಿಸ್ತಾರ ನ್ಯೂಸ್ ನ ಸಹಯೋಗದಲ್ಲಿ ತಾಲೂಕಿನ ಚೇಳ್ಳಗುರ್ಕಿಯಲ್ಲಿ ಬುಧವಾರ ಏರ್ಪಡಿಸಿದ್ದ
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡಿದ ಸಲಹೆಗಳನ್ನು ಪಾಲಿಸಿ ಉತ್ತಮ ಅಂಕಗಳನ್ನು ಪಡೆಯಿರಿ ಎಂದು ಹಾರೈಸಿದರು.
ಕಾರ್ಯಾಗಾರದಲ್ಲಿ ಮಕ್ಕಳಿಗೆ ಪ್ರಥಮ ಬಾರಿಗೆ ಪಬ್ಲಿಕ್ ಪರೀಕ್ಷೆ ಯನ್ನು ಎದುರಿಸುವ ವಿಧಾನ, ಗಣಿತ, ಇಂಗ್ಲೀಷ್, ವಿಜ್ಞಾನ ಮತ್ತು ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಗಳ ಬಗ್ಗೆ ಮಾಹಿತಿ ನೀಡಿದರು. ವಿಷಯವಾರು ಜಟಿಲವಾದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಹೇಗೆ ಬರೆಯಬೇಕು ಎಂಬಿತ್ಯಾದಿ ವಿಷಯವನ್ನು ನಾಲ್ಕು ಗಂಟೆಗಳ ನಡೆದ ಕಾರ್ಯಾಗಾರದಲ್ಲಿ ತಿಳಿಸಿ ಕೊಡಲಾಯಿತು.
ಕಾರ್ಯಾಗಾರದಲ್ಲಿ ಚೇಳ್ಳಗುರ್ಕಿ, ಶಿಡಿಗಿನಮೊಳ, ರೂಪನಗುಡಿ, ಹಗರಿ ಫಾರ್ಮ್, ಕೆ.ವೀರಾಪುರ ಗ್ರಾಮದಿಂದ ಸರಕಾರಿ ಪ್ರೌಢ ಶಾಲೆಯ 500ಕ್ಕೂ ಹೆಚ್ಚು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಎರ್ರಿಸ್ವಾಮಿ, ಪುರುಷೋತ್ತಮ್. ಸಿದ್ಧಲಿಂಗೇಶ್ವರ ಗದಿನ್, ಹರಿಪ್ರಸಾದ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ವಿಧಾನ ಮತ್ತು ವಿಷಯವಾರು ಮಾಹಿತಿಯನ್ನು ತಿಳಿಸಿ ಕೊಟ್ಟರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಅಂದಾನಪ್ಪ ವಡಿಗೇರಿ ಅವರು ಮಾತನಾಡಿ ಈ ಬಾರಿ ಜಿಲ್ಲೆ ಉತ್ತಮ ಫಲಿತಾಂಶದಿಂದ ರಾಜ್ಯದ ಗಮನ ಸೆಳೆಯಬೇಕಿದ್ದು ಶಿಕ್ಷಕರು, ಸಂಬಂಧಿಸಿದ ಅಧಿಕಾರಿಗಳು, ವಿದ್ಯಾರ್ಥಿಗಳು ಹೆಚ್ಚಿನ ಶ್ರಮಪಡುವ ಅಗತ್ಯವಿದೆ ಎಂದರು.
ಬಿಇಓ ಕೆಂಪಯ್ಯ, ಪಿಡಿ ಹಳ್ಳಿ ಪಿಎಸ್ ಐ ಶಶಿಧರ್ ವೈ ತಿಮ್ಮಪ್ಪ, ವಿಸ್ತಾರ ನ್ಯೂಸ್ ಕಲ್ಯಾಣ ಕರ್ನಾಟಕದ ಮುಖ್ಯಸ್ಥ ಶಶಿಧರ ಮೇಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ್ ಆಚಾರ್ , ಶಿಕ್ಷಣ ಸಂಯೋಜಕರು ಮತ್ತು ಎಸ್.ಎಸ್.ಎಲ್.ಸಿ.ತಾಲೂಕು ನೋಡೆಲ್ ಅಧಿಕಾರಿ ಗೂಳೆಪ್ಪ ಬೆಳ್ಳೇಕಟ್ಟೆ. ಹನುಮಂತ ರೆಡ್ಡಿ, ಶ್ರೀ ಎರ್ರಿಸ್ವಾಮಿ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಬಾಳನಗೌಡ, ಶ್ರೀ ಎರ್ರಿಸ್ವಾಮಿ ದಾಸೋಹ ಸೇವಾ ಸಂಘದ ಅಧ್ಯಕ್ಷ ಕೆ. ಪಂಪನಗೌಡ ಉಪಸ್ಥಿತರಿದ್ದರು. ದೇವಸ್ಥಾನದ ದಾಸೋಹ ಸೇವಾ ಸಂಘ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಿತ್ತು.
ವಿದ್ಯಾರ್ಥಿ ಜೀವನದಲ್ಲಿ ಎಸ್ ಎಸ್ ಎಲ್ ಸಿ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳ ಏಳಿಗೆಗೆ ಪೂರಕವಾಗಿ ಏರ್ಪಡಿಸಿದ್ದ ಕಾರ್ಯಾಗಾರ ಮತ್ತು ಆಯೋಜಕರ ಬಗ್ಗೆ ವಿದ್ಯಾರ್ಥಿ, ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
*****