ಬಳ್ಳಾರಿ,ಜ.೨೧: ನವಶಿಲಾಯುಗದ ಪಳೆಯುಳಿಕೆಗಳನ್ನು ಹೊಂದಿರುವ ಐತಿಹಾಸಿಕ ನಗರ ಎರಡು ದಿನಗಳ ವರ್ಣರಂಜಿತ ಬಳ್ಳಾರಿ ಉತ್ಸವಕ್ಕೆ ಸಜ್ಜುಗೊಂಡಿದೆ.
ಶನಿವಾರ(ಜ.೨೧)ದಿಂದ ಎರಡು ದಿನಗಳ ಕಾಲ ಜರುಗುವ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಸಂಜೆ ಆರು ಗಂಟೆಗೆ ಮುನಿಸಿಪಲ್ ಮೈದಾನದ ಬಳ್ಳಾರಿ ರಾಘವ ಮುಖ್ಯ ವೇದಿಕೆಯಲ್ಲಿ ಚಾಲನೆ ನೀಡುವರು.
ಬಳ್ಳಾರಿ ಜಿಲ್ಲೆ ವಿಭಜನೆಗೊಂಡ ಬಳಿಕ ಪ್ರಥಮ ಬಾರಿಗೆ ಆಯೋಜನೆಗೊಂಡಿರುವ ಉತ್ಸವವನ್ನು ಕಣ್ತುಂಬಿಕೊಳ್ಳಲು ಜನ ಕಾತರದಿಂದ ಇದ್ದಾರೆ. ಜಿಲ್ಲಾಡಳಿತ ಬಳ್ಳಾರಿ ಉತ್ಸವವನ್ನು ‘ಜನೋತ್ಸವ’ವಾಗಿ ಪರಿವರ್ತಿಸಲು ಶ್ರಮಿಸುತ್ತಿದೆ.
ಜಿಲ್ಲಾಡಳಿತ ಎರಡು ಮೂರು ದಿನಗಳಿಂದ ಚಿತ್ರಕಲಾ ಶಿಬಿರ, ಗಾಳಿಪಟ ಸ್ಪರ್ಧೆ, ಸಿರಿಧಾನ್ಯ ನಡಿಗೆ, ಅಲಂಕೃತ ಎತ್ತಿನ ಗಾಡಿ ಮೆರವಣಿಗೆ, ರಂಗೋಲಿ ಸ್ಪರ್ಧೆ, ಪ್ರದರ್ಶನ, ಮೆಹಂದಿ ಸ್ಪರ್ಧೆ, ಸೈಕಲ್ ಜಾಥಾ ಹಮ್ಮಿಕೊಳ್ಳುವ ಮೂಲಕ ಬಳ್ಳಾರಿ ಉತ್ಸವದಲ್ಲಿ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಲು ಕ್ರಮ ಕೈಗೊಂಡಿರುವುದು ವಿಶೇಷ.
ಗುರುವಾರದಿಂದ ಆಕಾಶದ ಮೂಲಕ ಬಳ್ಳಾರಿ ನಗರ, ಕೋಟೆ, ಸಮೀಪದ ಬೆಟ್ಟಗುಡ್ಡಗಳನ್ನು ವೀಕ್ಷಿಸಲು ಬಳ್ಳಾರಿ ಬೈಸ್ಕೈ ಆಯೋಜಿಸಿದೆ.
ಸ್ಥಳೀಯ ಪ್ರತಿಭೆಗಳೊಂದಿಗೆ ನಾಡಿನ ಖ್ಯಾತನಾಮರು ಕಾರ್ಯಕ್ರಮ ನೀಡುತ್ತಿದ್ದಾರೆ. ಶನಿವಾರ ಸಂಜೆ ವೇದಿಕೆ ಕಾರ್ಯಕ್ರಮದ ಬಳಿಕ ಎಂ.ಡಿ ಪಲ್ಲವಿ ಅವರಿಂದ ಗೀತಗಾಯನ, ಟಾಲಿವುಡ್ ಖ್ಯಾತ ಗಾಯಕಿ ಶ್ರೀಮತಿ ಮಂಗ್ಲಿ ಮತ್ತು ತಂಡ, ಹಾಗೂ ಬೆಂಗಳೂರಿನ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಹಾಗೂ ತಂಡ ಪ್ರಸ್ತುತ ಪಡಿಸುವ ರಸಮಂಜರಿ ಹಾಗೂ ಭಾನುವಾರ ರಾತ್ರಿ ಬಾಲಿವುಡ್ ಖ್ಯಾತ ಗಾಯಕಿ ಸುನಿಧಿ ಚವ್ಹಾಣ್ ಮತ್ತು ತಂಡ ನೀಡುವ ರಸಮಂಜರಿ ಉತ್ಸವದ ಆಕರ್ಷಣೆಯಾಗಲಿದೆ.
ಕೋಟೆಯ ಡಾ.ಜೋಳದರಾಶಿ ದೊಡ್ಡನಗೌಡರ ವೇದಿಕೆಯಲ್ಲಿ ಸಂಜೆ ೪ರಿಂದ ರಾತ್ರಿ ೧೨ರವರೆಗೆ ವಿವಿಧ ಕಲಾತಂಡಗಳಿಂದ ಸಂಗೀತ, ವಿವಿಧ ನೃತ್ಯ, ಬಯಲಾಟ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಯಲಿವೆ.
ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜರುಗಲಿರುವ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪವನ್‌ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
*****