ಬಳ್ಳಾರಿ, ಜ.23: ನಗರ ಪ್ರದೇಶದಲ್ಲಿ ನಾಟಕ, ನೃತ್ಯ, ಹಾಡುಗಾರಿಕೆ ಕೇವಲ ಪ್ರದರ್ಶನಕ್ಕೆ ಸೀಮಿತವಾಗುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಈ ಕಲೆಗಳಿಗೆ ಮಹತ್ವ ಕಡಿಮೆಯಾಗಿಲ್ಲ ಎಂದು ಶ್ರೀಧರಗಡ್ಡೆಯ ಬಿ.ಎಂ.ಗುರುಮೂರ್ತಿಸ್ವಾಮಿ ಅವರು ಅಭಿಪ್ರಾಯಪಟ್ಟರು.
ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹಂದ್ಯಾಳಿನ ಮಹದೇವತಾತಾ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಿಂದ ಹಮ್ಮಿಕೊಂಡಿದ್ದ. ಗ್ರಾಮೀಣ ಸಾಂಸ್ಕೃತಿಕ ಸಂಭ್ರಮ 2023 ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೋಲಾಟ, ಬಜನೆ, ದೊಡ್ಡಾಟ ಮೊದಲಾದ ಗ್ರಾಮೀಣ ಕಲೆಗಳ ಪ್ರದರ್ಶನ ಕಡಿಮೆ ಆದರೂ, ಅವುಗಳು ಎಂದಿಗೂ ನಶಿಸುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಜೀವಂತವಾಗಿರಲಿವೆ. ಇಂದಿನ ಅಧುನಿಕ ಬದುಕಿನಿಂದ ಜನತೆ ಮತ್ತೆ ಇಂತಹ ಕಲೆಗಳ ವೀಕ್ಷಣೆಗೆ ಬಯಸುವ ದಿನಗಳು ಬರಲಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹದೇವತಾತಾ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್ ಅವರು. ಯಾವುದೇ ಮಾಧ್ಯಮ ಪ್ರಕಾರ ಬಂದರೂ ಹಳ್ಳಿಗಳಲ್ಲಿ ನಾಟಕ ಕಲೆಗೆ ಜನರಿಂದ ಪ್ರೋತ್ಸಾಹದ ಕೊರತೆ ಇಲ್ಲ. ಅದರಲ್ಲೂ ಈ ಶ್ರೀಧರಗಡ್ಡೆ ಗ್ರಾಮ ಗದುಗಿನ ಶ್ರೀಗಳು ನಡೆದಾಡಿದ ತಾಣ. ಕೊಟ್ಟೂರು ಶ್ರೀಗಳ ಮಠ ಮೊದಲಾದ ಕಾರಣಗಳಿಂದ ಇಲ್ಲಿ ಭಕ್ತಿ ಸೇವೆಯಂತೆ ಕಲಾಸೇವೆಗೂ ಜನರಿಂದ ಸಹಕಾರ ದೊರೆಯುತ್ತದೆ.
ಸರ್ಕಾರ ಕಲಾ ಪ್ರಕಾರಗಳ ಪ್ರದರ್ಶನಕ್ಕೆ ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು.
ಅಧ್ಯಕ್ಷತೆವಹಿಸಿದ್ದ ಹಿರಿಯ ಪತ್ರಕರ್ತ ಎನ್.ವೀರಭದ್ರಗೌಡ ಮಾತನಾಡಿ, ನಗರ ಪ್ರದೇಶಗಳಲ್ಲಿ ಸರ್ಕಾರಿ ಪ್ರಾಯೋಜಿತ ಕಲೆಗಳ ಪ್ರದರ್ಶನಕ್ಕೆ ಪ್ರೇಕ್ಷಕರ ಕೊರತೆ ಇದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜನತೆ, ಹಾಡುಗಾರಿಕೆ, ನೃತ್ಯ, ಜನಪದ ಕಲೆಗಳ ಪ್ರದರ್ಶನವನ್ನು ವೀಕ್ಷಣೆಗೆ ಹೆಚ್ಚಿನದಾಗಿ ಮುಂದಾಗುತ್ತಾರೆ ಇದಕ್ಕೆ ಈ ಗ್ರಾಮದ ಇಂದಿನ ಕಾರ್ಯಕ್ರಮವೇ ಸಾಕ್ಷಿ ಎಂದರು.
ಸಮಾರಂಭದಲ್ಲಿ 98 ವರ್ಷದ ಹಿರಿಯ ರಂಗಭೂಮಿಕಲಾವಿದ ಟಿ.ಸೋಮನಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಮದ ಮುಖಂಡರುಗಳಾದ ಎ.ಸಿದ್ದಲಿಂಗಪ್ಪ, ಎಸ್.ಬಿ.ವೀರನಗೌಡ, ಎಸ್.ಡಿ.ಮಲ್ಲಿಕಾರ್ಜುನ, ದೊಡ್ಡಬಸಪ್ಪ, ಪಿ.ಅಂಬರೀಶ್, ಗುಡಿಮುಂದಲಬಸವರಾಜ್, ಪಿ.ನಿರಂಜನ್, ಎಂ.ಭೋಜರಾಜ, ಬಳ್ಳಾರಿ ಬಸವರಾಜ್ ಊರಿನ ಹಿರಿಯರು ಯುವಮುಖಂಡರು ಇದ್ದರು. ಪ್ರಾರ್ಥನೆಯನ್ನು ಕೆ.ಆರ್.ಎರ್ರೇಗೌಡ ಎ.ಜಂಬನಗೌಡ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಕು.ವೈ.ರೇಣುಕ ಅವರಿಂದ ನೃತ್ಯ, ಹೆಚ್.ಎಂ.ಗಂಗಾಧರ ತಂಡದಿಂದ ಜಾನಪದ ಗೀತೆಗಳ ಗಾಯನ, ಡಿ.ದಾನಗೌಡರ ಪಂಪನಗೌಡ ತಂಡದಿಂದ ಭಜನೆ, ಡಿ.ವೀರೇಶ ಮತ್ತು ತಂಡದಿಂದ ಕೋಲಾಟ ಹಾಗು ಜಿ.ಸುವರ್ಣ ಮತ್ತವರ ತಂಡದಿಂದ ಅಕ್ಕನಾಗಲಾಂಬಿಕೆ ನಾಟಕ ಪ್ರದರ್ಶನ ನೆರೆದ ಪ್ರೇಕ್ಷಕರ ಮನಸೂರಗೊಂಡವು.
*****