ಪದಬಂಧ
ಯಾರೊ
ಬರೆದಿಟ್ಟ ಪದ ಬಂಧದ
ಚೌಕದಲಿ ಮೈ ಮರೆತು ಕಳೆದು
ಹೋಗಿದ್ದೇನೆ ಹುಡುಕಿ ತಡುಕಿ ಹೊಂದಿಸಲಾಗದೆ ಈ ಗೊಂದಲ
ಗೋಜಲು ಪದಗಳ
ಯಾವ ಮೈ ಮರೆವಿನಲಿ
ಕಳೆದುಹೋಯಿತು ಶಕುಂತಲೆಯ
ಮೂರಕ್ಷರದ ‘ಉಂಗುರ’
ಬದುಕು ಮೂರಾಬಟ್ಟೆ ಮೀನ ಹೊಟ್ಟೆ
ಬಗೆಯುವವರೆಗೆ ಈಗ
ತೊಗಲ ಚೀಲದ ‘ ಭಾರ ‘
ಹೊತ್ತು ತಿರುಗುವ ‘ಕಾಯ ‘
ಅರೆ ಹೊತ್ತಿನಲಿ ಕೆರಳುವ ಸಣ್ಣ
ಕರುಳಿನ ‘ಕೂಗು’
ಹಸಿದವರ ಮುಂದೆ ಉಂಡವರ
ಹುಳಿ ‘ತೇಗು’
ಎಡದಿಂದ ಬಲಕೆ ಎರಡೇ ಎರಡು ಅಕ್ಷರ
ಸಿಕ್ಕರೆ ತಂದು ಕೊಡಿ ನಿಮ್ಮ ದಮ್ಮಯ್ಯ !
ಯಾರದೋ ಶಾಪಕೆ ಯಾರೋ ಶಿಕಾರಿ
ಕುರಡು ಕುದುರೆಯ ಮೇಲಿನ
ಬದುಕಿನ ಸವಾರಿ
ಯಾವುದೋ ಮೈ ಮರೆವಿನಲಿ
ಕಳೆದುಕೊಂಡ ಮಾನ
ಒಡಲು ಗೊಂಡವಳಿಗೆ ಮಾತ್ರ
ತಿಳಿಯುವುದು ಕಳೆದುಕೊಂಡವರ
ನೋವ
ಯಾರ ಯಾರದೋ ಋಣದ ಭಾರ
ಹೆಗಲು ಹೊತ್ತು
ಮರೆತು ಮೆರೆವ ಲೋಕ
ಹಗಲಿರುಳೂ
ಹುಡುಕುತ್ತಲೇ ಇದ್ದಾರೆ
ಎಲ್ಲರೂ ಏನಾದರೊಂದು ಇಲ್ಲಿ ಕಳೆದುಹೋದವರ
ನೆರಳುಗಳನ್ನು ಇದ್ದವರ ಕಣ್ಣಿಗೆ ಹೊಂದಿಸಿ
ಹೊಂದಿಕೆಯಾಗದ ಜಗ
ತುಂಬಲಾಗದ ಬಿಟ್ಟ ಜಾಗ
ಕೊಟ್ಟು ಮರೆತವನನು ಕಲ್ಲಾಗಿ
ಕುಳಿತಿರಲು ಮೇಲೆ
ಮೂರು ಲೋಕ ಸುತ್ತುವ
ನಿನಗೆ
ಎರಡಕ್ಷರದ ಪದ
ಸಿಗಲಾರದೇ ನಿಮ್ಮ ದಮ್ಮಯ್ಯ !
ಮೂರಕ್ಷರ ಪದದ ಉಂಗುರ ತಂದು
ಕೊಡು ತಂದೆ ನಿಮ್ಮ ಪಾದ!
ಇಂದು
ಪದ ಬಂಧ ಬಿಡಿಸುವೆ
-ಎಲ್ವಿ(ಡಾ. ಲಕ್ಷ್ಮಣ ವಿ ಎ), ಬೆಂಗಳೂರು
*****