ಹೊಸಪೇಟೆ (ವಿಜಯನಗರ) ಜ.26:ವಿಶ್ವವಿಖ್ಯಾತ ಹಂಪಿ ಉತ್ಸವದ ಆಚರಣೆ ಭಾಗವಾಗಿ ನಗರದಲ್ಲಿ ಗುರುವಾರ ನಡೆದ ‘ವಿಜಯನಗರ ವಸಂತ ವೈಭವ’ ಕಲಾ ಪ್ರದರ್ಶನ ಅಕ್ಷರಶಃ ಜನಮನ ಸೂರೆಗೊಂಡಿತು.
ಕಲಾ ಪ್ರದರ್ಶನಕ್ಕಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ವಿಜಯನಗರಕ್ಕೆ ಆಗಮಿಸಿದ್ದ ಕಲಾ ತಂಡಗಳು ನಗರದ ವಡಕರಾಯ ದೇವಸ್ಥಾನದ ಬಳಿ ಸಂಜೆ ಸಮಾವೇಶಗೊಂಡು ಪ್ರದರ್ಶಕ್ಕೆ ಬೇಕಾದ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು, ಪೋಷಾಕು ಧರಿಸಿ ಮೆರವಣಿಗೆಗೆ ಸನ್ನದ್ಧರಾಗಿದ್ದರು.
ಈ ವೇಳೆ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ನಂತರ ಹಸಿರು ನಿಶಾನೆ ತೋರಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ತಾಯಿ ಭುವನೇಶ್ವರಿ ದೇವಿಯನ್ನು ಹೊತ್ತು ವಾಹನದ ಮುಂಭಾಗದಲ್ಲಿ ಹಂಪಿಯ ಆನೆ ಲಕ್ಷ್ಮಿಯು ವಿರಾಜಮಾನವಾಗಿ ಹೆಜ್ಜೆ ಹಾಕಿ ಗಮನ ಸೆಳೆಯಿತು.
ತಾಯಿ ಭುವನೇಶ್ವರಿ ಹೊತ್ತ ತೆರೆದ ವಾಹನವನ್ನು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ಖುದ್ದು ತಾವೇ ಚಲಾಯಿಸಿ ಗಮನ ಸೆಳೆದರು. ಈ ವೇಳೆ ಸಚಿವರು ಸಾರ್ವಜನಿಕರತ್ತ ಕೈಬೀಸಿ ನಮಸ್ಕರಿಸಿ ಸಂತಸ ವ್ಯಕ್ತಪಡಿಸಿದರು. ಅಭಿಮಾನಿಗಳು ಸಚಿವರೊಂದಿಗೆ ಜೊತೆಗೆ ನಿಂತು ಫೋಟೊ ತೆಗೆಯಿಸಿಕೊಂಡು ಅಭಿಮಾನ ತೋರಿದರು.
ಮೆರವಣಿಗೆಯ ಮುಂಭಾಗದಲ್ಲಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ , ಸಂಸದ ದೇವೇಂದ್ರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್, ಅಪರ ಜಿಲ್ಲಾಧಿಕಾರಿ ಅನುರಾಧ ಕೆ. ಹಾಗೂ ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ ಅವರು ಹೆಜ್ಜೆ ಹಾಕಿದರು.
ನಗರದ ವಡಕರಾಯ ದೇವಸ್ಥಾನದಿಂದ ಆರಂಭಗೊಂಡು ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿದ ಮೆರವಣಿಗೆಯಲ್ಲಿ ಕಂಸಾಳೆ, ಮರಗಾಲು ಕುಣಿತ, ಕಂಸಾಳೆ ನೃತ್ಯ, ಮಹಿಳಾ ಪಟಕುಣಿತ, ಸಿಂಧೋಳ ಕುಣಿತ, ನಂದಿಕೋಲು, ಮಹಿಳಾ ಉರುಮೆವಾದ್ಯ, ವೀರಗಾಸೆ, ಹುಲಿವೇಷ, ಚಂಡೆವಾದನ, ಕಥಕ್ಕಳಿ, ಮಯೂರ ನೃತ್ಯಂ, ಪಂಜಾಬಿ ಡೋಲ್, ಗೊರವರ ಕುಣಿತ ಸೇರಿದಂತೆ ಒಟ್ಟು 100 ಕಲಾತಂಡಗಳು ನಗರದ ಮುಖ್ಯ ರಸ್ತೆಗಳಲ್ಲಿ ಪ್ರದರ್ಶನ ನೀಡಿ ಕಣ್ಮನ ತಣಿಸಿದವು.
ವಿದ್ಯುದೀಪಗಳಿಂದ ಅಲಂಕಾರ: ಹಂಪಿ ಉತ್ಸವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ವಿದ್ಯುದೀಪಗಳಿಂದ ಅಲಂಕರಿಸಿದ್ದರಿಂದ ವಿಜಯನಗರ ವಸಂತ ವೈಭವ ಕಲಾ ಪ್ರದರ್ಶನದ ಮೆರುಗು ಮತ್ತಷ್ಟು ಹೆಚ್ಚಿತ್ತು.
*****