ಅನುದಿನ ಕವನ-೭೫೭, ಕವಯಿತ್ರಿ:ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್

ಗಜಲ್

ಸಮಯದ ಪರಿಯ ದಾಟಿ
ಹಾಡಿದೆ ಹೊಸ ಕವಿತೆ
ನೆಲದ ಎಲ್ಲೆಯ ಮೀರಿ
ಕಾಡಿದೆ ಹೊಸ ಕವಿತೆ

ಮಾತು ಮೌನಗಳ ಆಚೆಗೆ
ಕೊರಳೊಳು ಧ್ವನಿ ಇಲ್ಲವಾಗಿದೆಯೇಕೆ
ಅಕ್ಷರಗಳ ಕಟ್ಟಳೆಗಳ ಕಳೆದು
ಕಂಡಿದೆ ಹೊಸ ಕವಿತೆ

ಸಂಧಿಸಿ ಹೆಸರಿಲ್ಲದ ಊರಿನಲಿ
ಕುಸುಮ ಪರಿಮಳ ಸೂಸಿ
ಹಸಿನೆನಪ ಬುತ್ತಿಯ ಸವಿದು
ಕೂಡಿದೆ ಹೊಸ ಕವಿತೆ

ಕುರುಡನಾ ಕಣ್ಣಿನ ಮುಂದೆ
ಸಾಗುತ್ತಿದೆ ಕರಿ ನೆರಳು
ನೆನೆದು ಅದರಿರುವಿಕೆ ಚಿತ್ರದಿ
ಬಿಡಿಸಿದೆ ಹೊಸ ಕವಿತೆ

ನಟ್ಟಿರುಳ ಸೀಳಿ ಸುಳಿದಿದೆ
ತಿಂಗಳ ಬೆಳಕಿನ ಕಿರಣ
ಚೇತೋಹಾರಿ ರತುನಳ ಮನದಲಿ
ಮೂಡಿದೆ ಹೊಸ ಕವಿತೆ

 

ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ.             *****