ನಾಡಿನ ಪ್ರಸಿದ್ಧ ಕವಿ, ಕತೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್ (82) ವಿಧಿವಶರಾಗಿದ್ದಾರೆ. ಸೋಮವಾರ(ಜ.30) ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದರು. ಅವರಿಗೆ ಪತ್ನಿ, ಮೂವರು ಹೆಣ್ಣುಮಕ್ಕಳಿದ್ದಾರೆ.
ಅಲ್ಪಕಾಲದ ಅಸೌಖ್ಯದಿಂದ ಅವರು ಬಳಲಿದ್ದರು. ಹೃದಯ ಕಾಯಿಲೆ ಹೊಂದಿದ್ದ ಅವರಿಗೆ ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಳೆದ ವಾರದವರೆಗೂ ಆಸ್ಪತ್ರೆಯಲ್ಲಿದ್ದ ಅವರು ನಿನ್ನೆಯಷ್ಟೇ ಮನೆಗೆ ಬಂದಿದ್ದರು.
ಪತಿಚಯ: ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಎಂಬ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಜನಿಸಿದ ಕೆ.ವಿ. ತಿರುಮಲೇಶ್ ಇವರು ಕನ್ನಡ ಭಾಷೆಯ ಬಹು ಮುಖ್ಯ ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕರಾಗಿ ಗಮನಸೆಳೆದಿದ್ದರು.
ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಆಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ನಿವೃತ್ತಿ ಹೊಂದಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಕವಿಗಳ ಅಕ್ಷಯ ಕಾವ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ತಿರುಮಲೇಶ್ ಅವರು ವಠಾರ ಸಂಕಲನ ಸೇರಿದಂತೆ ಒಂಬತ್ತು ಕವನ ಸಂಕಲನ ಪ್ರಕಟಿಸಿದ್ದಾರೆ.
*****
🙏ಶ್ರೀ ಕೆ ವಿ ತಿರುಮಲೇಶ್ ಅವರ ‘ಮಾತನಾಡಿ ಬೊಂಬೆಗಳೆ ಮಾತನಾಡಿ’ ಕವಿತೆ ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್
ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದೆ.🙏
🌺👇🙏👇🙏🌺
ಮಾತನಾಡಿ ಬೊಂಬೆಗಳೆ
ಮಾತನಾಡಿ
ನಿಮ್ಮನ್ನಿಲ್ಲಿಗೆ ತಂದೆ ಮುದ್ದು ಮಗಳ ತಂದೆ
ನಿಮಗೆ ಗೊತ್ತಿರಲಿಲ್ಲ ಏನು ಯಾಕೆಂದೆ
ಮಾತನಾಡಿ ಗೊಂಬೆಗಳೆ
ಬೆಳೆದು ದೊಡ್ಡವಳೀಗ ಆ ಮಗಳು
ನಿಮ್ಮ ನೋಡುವುದಕ್ಕೆ ಅವಳಿಗೆಲ್ಲಿಯ ವೇಳೆ
ಅವಳಿಟ್ಟ ಹೆಸರುಗಳು ನೆನಪಿದೆಯೆ ನಿಮಗೆ
‘ಬನ್ನಿ’ ಎಂದರೆ ಮೊಲ
‘ಹೊರಡಿ ‘ಎಂದರೆ ಕರಡಿ
‘ಒಂಟಿ’ ಎಂದರೆ ಒಂಟೆ
‘ಬಂದ’ ಎಂದರೆ ಮಂಗ
ಯಾರು ಕರೆಯುತ್ತಾರೆ ನಿಮ್ಮನೀಗ ಈ ಇಂಥ
ಮುದ್ದು ಹೆಸರುಗಳಿಂದ ?
ಮಾತನಾಡಿ ಬೊಂಬೆಗಳೆ ಮಾತನಾಡಿ
ನಿಮ್ಮ ಮಾತು ಕೇಳಲೆಂದೆ
ಬಂದೆ ನಾನು
ರಾತ್ರಿಯೆಲ್ಲಾ ಎಚ್ಚರವಿರುವೆ
ಹಚ್ಚಡವನೂ ಹೊದ್ದುಕೊಳದೆ
ನೀವು ಅದೋ ಏಳುವಿರಿ
ಎಲ್ಲ ಕಡೆ ಸುತ್ತುವಿರಿ
ಅಡುಗೆ ಕೋಣೆಯಲೇನೊ ಉರುಳಿ
ಬಿದ್ದ ಸದ್ದು
ಆಮೇಲೆ ಕದ್ದು ನೀವು
ಕಿಟಕಿಯಲಿ ಕೂರುವವರು
ರೆಪ್ಪೆ ಕೂಡ ಮುಚ್ಚದೆ
ಅದೇನೋ ಹೊರಗೆ ನೋಡುವಿರಿ
ಆದರೆಂದೂ ನೀವು ಯಾಕೊ
ಮಾತನಾಡಿರಿ
ಮುಂಜಾನೆ ವೇಳೆಗೆ ನೀವು
ಮಾಯಾ ರೂಪಿಗಳು
ಕಪಾಟಿನೊಳಗೆ ಹೊಕ್ಕು
ಯಥಾ ಸ್ಥಾನವನ್ನು ಸೇರುವಿರಿ
ಮಗಳು ಅನ್ನುತ್ತಿದ್ದಳು
ನೀವು
ನಿಮ್ಮೊಳಗೆಯೇ ಆಡಿಕೊಳುವುದುಂಟು ಎಂದು
ನಾನೆಂದೂ ಕೇಳಿದ್ದಿಲ್ಲ
ನಿಮ್ಮ ಮಾತಿಗೆಂದು ನಾನು
ಎಷ್ಟು ಹಾತೊರೆದಿಲ್ಲ
ನನ್ನ ಮಗಳ ಮಾತು ಈಗ
ಮೊದಲಿನಂತೆ ಇಲ್ಲವಲ್ಲ
ನನಗೆ ನೆನಪಿರುತ್ತಿದ್ದರೆ
ನಿಮ್ಮ ಬಿಟ್ಟು ಬರುತ್ತಿದ್ದೆ
ಎಲ್ಲೆಲ್ಲಿಂದ ತಂದೆನೋ
ಅಲ್ಲಲ್ಲಿಗೆ
ಕೆಲವು ಸಂತೆ ಕೆಲವು ಪೇಟೆ
ಕೆಲವು ಬೀದಿಯಲಿ ಸಿಕ್ಕು
ಇನ್ನು ಕೆಲವು ತಲೆಹೊರೆ
ವ್ಯಾಪಾರಿಗಳ ಬುಟ್ಟಿಯಲ್ಲಿ
ನೆನಪಿಲ್ಲ ನೆನಪಿಲ್ಲ ಅಮ್ಮ ಅನ್ನುತ್ತಿದ್ದಳು
ನಾನು ಕೂಡಾ ಹೀಗೇನೇ
ಬಿದ್ದು ಸಿಕ್ಕಿದವನು ಎಂದು
ಮಾತನಾಡಿ ಗೊಂಬೆಗಳೆ
ಮಾತನಾಡಿ
-ಕೆ ವಿ ತಿರುಮಲೇಶ
*****