ಅನುದಿನ ಕವನ-೭೬೧, ಕವಯಿತ್ರಿ: ಡಾ. ಬಿ ಆರ್ ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ ಕವನದ ಶೀರ್ಷಿಕೆ: ಕಗ್ಗತ್ತಲು

ಕಗ್ಗತ್ತಲು

ಸುತ್ತಲೂ ಕವಿದಿರುವ ಕಗ್ಗತ್ತಲಿಗೆ
ರಾತ್ರಿಯ ಕೊಳ್ಳಿದೆವ್ವಗಳ ಚಿಂತೆ
ಯಾಕೆಂದರೆ,
ಮಾನ್ಯತೆಯಿಲ್ಲದ ಗಿಡಮರಗಳಿಗೆ ಅಕ್ಷರ ಜ್ಞಾನವಿಲ್ಲದೆ ಒದ್ದಾಡುತ್ತಿವೆ…

ಬಡಿದಾಡುವ ಸಮಾಜದಲ್ಲಿ
ತಮ್ಮದೇ ಆದ ಗೂಡು ಕಟ್ಟಿರುವ ಪಕ್ಷಿಗಳು
ಯಾರದೋ ದಬ್ಬಾಳಿಕೆಗೆ
ಬೆದರುತ್ತಿವೆ….

ಕಗ್ಗತ್ತಲೆಯ ಚೌಕಟ್ಟಿಗೆ ಭಯ
ಹುಟ್ಟಿಸುವ ಜಾತಿ ಮೃಗಗಳು
ಕಾಡನ್ನು ಬರಿದಾಗಿಸಲು
ಹೊಂಚುಹಾಕುತ್ತಿವೆ…

ಯಾವುದೋ ಮರಕ್ಕೆ
ಇನ್ಯಾವುದೋ ಎಲೆಯು ತಾಕಿ
ಗೆಳೆತನ ಬಯಸಿ
ಬದುಕುವ ಕಾಡಿಗೆ, ಕೊಳಕಾದ
ಮೊಳೆಯ ಬಂಧನಕ್ಕೆ
ಕಾಡೇ ಮಲಿನವಾಗುತ್ತಿದೆ…

ಬೆಟ್ಟ ಗುಡ್ಡಗಳು,ಹರಿವ ಜರಿಗಳು,ಹಾಡುವ ಪಾಡ್ದನಗಳು ಇವೆಲ್ಲಾ
ಸುಖಮಯವಾಗಿ ಸಮಯ
ಕಳೆವ ಹೊತ್ತಿಗೆ,ಶುರುವಾಯಿತೆ
ಬೆಂಕಿಯ ಬಿರುಗಾಳಿ…

ಆ ಕೆಲಸಕ್ಕೆ ನೂರಾರು ಹೊಸ
ಕೈಗಳು ಸಂಚಾಗಿ ,ಹೊಂಚಾಕಿ
ಕೆಡಿಸುವ ಕೆಲಸ ಸಾಗುತ್ತಿದೆ…

ಇದನ್ನೆಲ್ಲಾ ಹತ್ತಿಕ್ಕಲು ಅಲ್ಲಿನ
ಪಕ್ಷಿಗಳಿಗೆ ಬಾಯಿಯಿಲ್ಲ
ಹಾರುವೆನೆಂದರೆ ರೆಕ್ಕೆಗೆ
ಶಕ್ತಿಯಿಲ್ಲ.
ಸಂಚಿನ ಕೊಳ್ಳಿದೆವ್ವ
ರಕ್ತ ಕಾರುತ್ತಾ ಅಲುಗಾಡಿಸುವ
ಮೈಗೆ ಕಗ್ಗತ್ತಲೂ ಹೆದರುತ್ತಾ
ಮುದುಡುತ್ತಿದೆ……


-ಡಾ. ಬಿ ಆರ್ ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
*****