ಸಿರಿಗೇರಿ ಜೆ ಎಚ್ ವಿ ಶಾಲಾ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ

ಸಿರುಗುಪ್ಪ, ಫೆ.5 : ತಾಲೂಕಿನ ಸಿರಿಗೇರಿ ಜೆಎಚ್ ವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶನಿವಾರ ಶಾಲೆಯ ವಾರ್ಷಿಕೋತ್ಸವ ಜರುಗಿತು.
ಈ ಬಾರಿಯ ಶಾಲೆಯ ವಾರ್ಷಿಕೋತ್ಸವದಲ್ಲಿ, ಉತ್ತಮ ಅಂಕಗಳ ಮೂಲಕ ಪದವಿ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ಗ್ರಾಮಕ್ಕೆ ಕೀರ್ತಿ ತಂದ ಸ್ಥಳೀಯ ಯುವಕರನ್ನು ಗುರುತಿಸಿ ಸನ್ಮಾನ ಮಾಡಿದ್ದು ಗಮನ ಸೆಳೆಯಿತು.


ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನೀಡಿದ 2022ನೇ ಸಾಲಿನ ಡಾ. ಬಿ. ಅರ್. ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿಯನ್ನು ಕಳೆದ ತಿಂಗಳು ಸ್ವೀಕರಿಸಿದ ಸಂಶೋಧನಾ ವಿದ್ಯಾರ್ಥಿ ಈಶ್ವರ್ , ವಿಎಸ್ ಕೆ ವಿವಿಯ ವಾಣಿಜ್ಯ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ. ಮೌನೇಶ್, ಬೆಂಗಳೂರು ವಿವಿಯ ನಾಟಕ ವಿಭಾಗದಲ್ಲಿ ಚಿನ್ನದ ಪದಕ ಪಡೆದ ರಾಜಶೇಖರ್ ವೈ, ವಿಎಸ್ ಜೆಯುವಿಯ ಯು.ಜಿ. ಡಿಪ್ಲೊಮಾದಲ್ಲಿ ಚಿನ್ನದ ಪದಕ ಪಡೆದ ಬಸವರಾಜ್ ವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ದೊಡ್ಡನಗೌಡ ಮಾತನಾಡಿ ಗ್ರಾಮದ ವಿದ್ಯಾರ್ಥಿಗಳು, ಯುವಕರು ವಿಶೇಷ ಸಾಧನೆ ಮೂಲಕ ಊರಿಗೆ, ನಾಡಿಗೆ ಗೌರವ ತರಬೇಕು ಎಂದರು.
ಮುಖ್ಯ ಅತಿಥಿ ಸಿರುಗುಪ್ಪ ತಾಲೂಕು ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ ಅವರು ಮಾತನಾಡಿ ಖಾಸಗಿ ವಿದ್ಯಾಸಂಸ್ಥೆಗಳು ಗ್ರಾಮೀಣ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಆದ್ಯತೆಯನ್ನು ಹೊಂದಿರ ಬೇಕು. ಹಣ ಗಳಿಕೆಯ ಉದ್ದೇಶವನ್ನು ಹೊಂದಿರಬಾರದು. ಸಿರುಗುಪ್ಪ ತಾಲೂಕಿನಲ್ಲಿ ವಿದ್ಯೆಗೆ ಹೆಚ್ಚಿನ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿರುವ ಸಂಸ್ಥೆಗಳಲ್ಲಿ ಸಿರಿಗೇರಿಯ ಜೆಎಚ್ ವಿ ಶಾಲೆಯು ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂಜಾರಿ ಲಕ್ಷ್ಮಮ್ಮ ಕರಿಯಪ್ಪ, ಜೆಎಚ್ ವಿ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಜೆ. ಮಲ್ಲಿಕಾರ್ಜುನ ಗೌಡ, ಸಿರುಗುಪ್ಪ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗಲೂರು ಮಲ್ಲನಗೌಡ, ಶಾಲೆಯ ಕಾರ್ಯದರ್ಶಿ ಪ್ರೊ.ಜೆ. ದೊಡ್ಡನಗೌಡ, ಮುಖ್ಯೋಪಾಧ್ಯಾಯ ವಿರೂಪಾಕ್ಷ ಗೌಡ, ಶಾಲೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪೋಷಕರು, ಗ್ರಾಮದ ಮುಖಂಡರು, ನಾನಾ ಸಂಘಟನೆಗಳ ಪದಾಧಿಕಾರಿಗಳು, ಮತ್ತಿತರರು ಇದ್ದರು.
*****