ಅನುದಿನ ಕವನ-೭೬೮, ಕವಿ: ಡಾ. ಎಚ್.ಟಿ. ಪೋತೆ, ಕಲಬುರಗಿ, ಕವನದ ಶೀರ್ಷಿಕೆ: ಬೆಳಕಾದಿ ತಾಯಿ

ಬೆಳಕಾದಿ ತಾಯಿ

ಹುಟ್ಟಿದಾ ಮನೆಗೆ ಹರಿಸಿ
ಮೆಟ್ಟಿದಾ ಮನೆಗೆ ಮಲ್ಲಿಗೆಯಾದೆ
ವರಸಿದಾ ಭೀಮನ ಭುಜಕೆ
ಶಕ್ತಿಯಾದೆ ನೀ ತಾಯಿ

ಬಿಸಿಲೇ ಬೆಳದಿಂಗಳೆಂದು
ಕತ್ತಲೆಯನು ಹಗಲಾಯಿಸಿ
ಬದುಕೆಂಬ ಕಲ್ಲುಮುಳ್ಳಿನ
ಕಾಂತಾರ ದಾಟಿದೆ ನೀ ತಾಯಿ

ಜಯಿಸಿದೀ ಹಸಿವು ಬಡತನ ದಾರಿದ್ರ್ಯ
ನೀಗಿಸಿದೀ ಸಂಸಾರದ ನೌಕೆಯನು
ಬದುಕಿದೀ ನೀ ಸೂರ್ಯನೊಬ್ಬನ ಹೆಗಲಾಗಿ
ನೀಡಿದೀ ನೆಲಕೆ ಬಿಡುಗಡೆಯ ಬೆಳಕನು ತಾಯಿ

ನಿನ್ಹಂಗ ಸಹಿಸಲಿಲ್ಲ ನೋವ
ನಿನ್ಹಂಗ ಹಂಬಲಿಸಲಿಲ್ಲ ಜೀವ
ನೊಂದವರ ತಳದಿಸಿಕ್ಕವರ
ಬದುಕು ಬೆಳಕಾಗಲು ತಾಯಿ

ನಿನಗಾರು ಸಾಟಿ ಇಲ್ಲ
ನಿನ್ಹಂಗ ಬದುಕಲಿಲ್ಲ
ನಿನ್ನನೀ ಸುಟ್ಟುಕೊಂಡು
ಬಹುಜನ ಬದುಕಿಗೆ ಬೆಳಕಾದೆ ತಾಯಿ

-ಪ್ರೊ.ಎಚ್.ಟಿ.ಪೋತೆ, ಕಲಬುರಗಿ
*****