ಆರದ ಬೆಳಕು…..
ರಾಜ್ಯ ಬಿಟ್ಟು ಹೊರಟವನ ಬಳಿ
ಹತಾರಗಳಿರಲಿಲ್ಲ
ಎದೆಯ ತುಂಬಾ ಪ್ರೇಮ
ಪ್ರೀತಿಗೊಂದು ಜೋಳಿಗೆ!
ರಾಜ್ಯ ತೊರೆದವನು ಕನಸಿದ್ದು
ಪ್ರೇಮದ ಸಾಮ್ರಾಜ್ಯವನ್ನು
ಜೋಪಡಿಗಳ ತುಂಬೆಲ್ಲ
ಕಾರುಣ್ಯ ಚೆಲ್ಲಿದವನು
ಹನಿಸಿದ್ದು ಪ್ರೇಮವನ್ನಷ್ಟೆ!
ಬೆರಳು ಕೇಳಿದವನಿಗೆ
ಎರಡೂ ಹಸ್ತ ಚಾಚಿದವ
ಹರಿದದ್ದು ನೆತ್ತರಲ್ಲ
ಪಶ್ಚಾತ್ತಾಪದ ನದಿ!
ಕತ್ತಿ ಮಸೆದವರೂ ಕರಗಿದರು
ಕಣ್ಣ ಪ್ರೇಮದ ಬೆಳಕಿಗೆ
ಧರ್ಮಗಳಾಚೆಗೂ
ಎದೆಗಳ ಬೆಸೆದ ಜೀವಕಾರುಣ್ಯಕ್ಕೆ!
-ವರಮಹಾಲಕ್ಷ್ಮಿ ಟಿ.ಆರ್
ಚಿಕ್ಕನಾಯಕನಹಳ್ಳಿ, ತುಮಕೂರು ತಾ
*****
ಪ್ರೀತಿ, ಪ್ರೇಮದಿಂದಲೇ ಮಾತ್ರ ಎಲ್ಲವೂ ಸಾಧ್ಯ, ಅತ್ಯುತ್ತಮ ಕವಿತೆ ವರ.