“ಓದಿಗಾಗಿ, ನೌಕರಿಗಾಗಿ ಪಟ್ಟಣ ಸೇರಿ ಕಲಿಯಬಾರದ್ದು ಕಲಿತು, ಕೆಟ್ಟು ಮನೆಗೆ ಬಂದ ಪಾಪಿ ಮಕ್ಕಳ ಕತೆಯೇ ಈ ಕವಿತೆ. ನರಳುವ ತಾಯ್ತಂದೆಯರ ಕಂಗಳ ಭಾಷ್ಪಗಳ ಭಾಷ್ಯದ ಹೃದ್ರಾವಕ ಭಾವಗೀತೆ. ಇಂತಹ ದೃಶ್ಯ ಕಂಡವರಿಗೆ, ಅನುಭವಿಸಿದವರಿಗೆ ಆ ನರಕ ಯಾತನೆಯ ತೀವ್ರತೆ, ತೀಕ್ಷ್ಣತೆ ಅರ್ಥವಾಗಬಲ್ಲದು. ಎದೆ ನಡುಗಿಸಬಲ್ಲದು” ಅಂತಾರೆ ಕವಿ ಎ.ಎನ್.ರಮೇಶ್ ಗುಬ್ಬಿ ಅವರು ವಿಷಾಧದಿಂದ! 👇
ಕರುಳಿರಿವ ದೃಶ್ಯ.!
ತಡವರಿಸುವ ನಾಲಿಗೆ
ತೊದಲುವ ಮಾತು
ಹೇಳಿತ್ತವನ ಪರಾಕ್ರಮ
ನುಡಿಸುತ್ತಿದ್ದ ಹೊಟ್ಟೆ
ಒಳಗಿಂದಲೇ ಪರಮಾತ್ಮ.!
ತಪ್ಪುತ್ತಿದ್ದ ಹೆಜ್ಜೆಗಳು
ತೂರಾಡುತ್ತಿದ್ದ ನಡಿಗೆ
ತಿಳಿಸುತ್ತಿತ್ತವನ ಮಹಾತ್ಮೆ
ಕುಣಿಸುತ್ತಿದ್ದ ಒಡಲು
ಸೇರಿದ್ದ ಎಣ್ಣೆ ಪರಮಾತ್ಮ.!
ಕೆಂಪೇರಿದ್ದ ಕಣ್ಣಿನಮಲು
ದುರ್ವಾಸನೆಯ ಘಮಲು
ಸೂಚಿಸಿತ್ತವನ ಘನಕಾರ್ಯ
ಆಡಿಸುತ್ತಿದ್ದ ತನುಮನ
ಆವರಿಸಿದ್ದ ನಶಾ ಪರಮಾತ್ಮ.!
ಅಮ್ಮನ ಅಳು ಬಿಕ್ಕಳಿಕೆ
ಅಪ್ಪನ ಸಿಟ್ಟು ಚಡಪಡಿಕೆ
ಬಿಂಬಿಸಿತ್ತವನ ಸಾಧನೆ
ಜಿನುಗುತ್ತಿದ್ದ ಕಂಬನಿ
ತೋರಿತ್ತವರ ಅಂತರಾತ್ಮ.!
ಹಾರಾಡುತ್ತಿದ್ದರೆ ಮಗನ
ಒಳಗಿನ ಮಧಿರಾ ಪರಾಮಾತ್ಮ
ದಾರಿತಪ್ಪಿದವನ ಸ್ಥಿತಿಗೆ
ಮರುಗಿ ಕೊರಗಿ ಚೀರುತ್ತಿತ್ತು
ಹೆತ್ತೊಡಲಲಿ ಅಂತರಾತ್ಮ.!
ಕಟ್ಟಿಕೊಂಡ ಕನಸುಗಳನೆಲ್ಲ
ಚೂರಾಗಿಸಿ ಕಣ್ಣೀರಾಗಿಸಿದ
ಭರವಸೆಗಳ ಬೂದಿಯಾಗಿಸಿದ
ಕುಲಾಂತಕನ ಶಪಿಸುತ್ತಿತ್ತು
ನೊಂದ ನಿಷ್ಪಾಪಿ ಅಂತರಾತ್ಮ.!
-ಎ.ಎನ್.ರಮೇಶ್ ಗುಬ್ಬಿ, ಕೈಗಾ, ಕಾರವಾರ ಜಿ.