ಅನುದಿನ ಕವನ-೭೮೧, ಕವಯತ್ರಿ: ಕೆ. ಪಿ. ಮಹದೇವಿ. ಅರಸೀಕೆರೆ, ಕವನದ ಶೀರ್ಷಿಕೆ: ಪ್ರೀತಿಯ ನೆಲೆ

ಪ್ರೀತಿಯ ನೆಲೆ

ಆಚಾರದರಸುಗಳಾಗಿ
ಕದಳಿವನದ ಹಾದಿ ಹಿಡಿದವರು
ಕೇದಗೆಯ ಬನವ ಮೆಟ್ಟಿ
ಮಲ್ಲಿಗೆ ಸಂಪಿಗೆಯ ತೋಟಗಳ ದಾಟಿ
ಚರಾಚರದ ಸೀಮೆಯ ಮೀಟಿ
ಆತ್ಮದ ಸ್ತಂಭವನಿಡಿದು
ಸ್ಥಿರವಾಗುವಾಗ ಪ್ರೀತಿಯ ಅಲೆಯೇ
ಭಕ್ತಿರಸವಾಗಿ ಉಕ್ಕಿಉಕ್ಕಿ ಹರಿದದ್ದು.

ಯುದ್ಧ ಗದ್ದಲಗಳ ಸದ್ಹಡಗಿ ಮದ್ದಿಟ್ಟ
ನೆಲದಲ್ಲೂ ,
ಕೋಟೆ ಕೊತ್ತಲ ಮಿನಾರುಗಳೆದ್ದು
ಬಿದ್ದೆಡೆಯಲ್ಲೂ ಚಿಗುರಿದ ಗರಿಕೆ
ಕಾದು ಕಾದು ಕಡಲೆದೆಯ ಭಾವಗಳು
ಎದ್ದೆದ್ದು ಮೊರೆದು ಚಂದ್ರಿಕೆಯ ತಬ್ಬುವುದು
ಸೂರ್ಯ ಚಂದ್ರ ನಕ್ಷತ್ರಗಳ ಸಾಕ್ಷಿಯಾಗಿ
ಭೂಮಿಯಲಿ ಬಿಸಿಲುರಿದು ಮಳೆಸುರಿದು
ಪ್ರೀತಿಯ ಪಾರಿಜಾತಗಳು ಅರಳುವಾಗ ಯುಗಯುಗಗಳುರುಳಿ ಮರಳುವವು.

ವರ್ಷವೊಂಭತ್ತು ಕಾಲದೊಳಗೂ
ನೀವೆಂಬ ದಿಟದ ಬೆಳಕಿನ ಜೊತೆಯು
ಸ್ವಸ್ವರೂಪವನಿತ್ತು ನನ್ನ ನೆಲೆಗೊಳಿಸಿ
ಅಷ್ಟದಿಕ್ಕುಗಳಲ್ಲೂ ಕಷ್ಟಗಳ ದಗ್ಬಂಧಿಸಿ
ಹೆಜ್ಜೆಯಿಡುವ ಮಣ್ಣಿನಡಿಯೊಳಗೆಲ್ಲಾ
ಮೊಳಕೆಯಾಗುವ ಬೀಜಗಳಿರುವ
ಸೂಕ್ಷ್ಮವ ಎಚ್ಚರಿಸುವಾಗೆಲ್ಲಾ ಪ್ರೀತಿಯ
ಪಾರಿವಾಳಗಳು ಲಟಪಟನೆ ರೆಕ್ಕೆ ಬಿಚ್ಚಿ
ಅಸೀಮ ನೀಲಾಗಸಕೆ ಹಾರುತ್ತವೆ.

-ಕೆ. ಪಿ. ಮಹದೇವಿ.
ಅರಸೀಕೆರೆ.
*****