ಅನುದಿನ ಕವನ-೭೮೨, ಕವಿಯಿತ್ರಿ; ಡಾ. ಬಿ ಆರ್ ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಮೌನ ಮಾತಾದಾಗ

ಮೌನ ಮಾತಾದಾಗ

ದಿಗ್ಭ್ರಮೆಗೊಳಿಸಿದೆ ಮೌನ
ಪಾದುಕೆಯ ಗಾಲಿಯು
ಖಾಲಿ ಟಾರು ರೋಡಲಿ ವೇಗದಿ
ಸಾಗಲು,,
ಗುಯ್ ಗುಟ್ಟಿದೆ ಮನದ ರಾಗ..

ಸುತ್ತಲೂ ಸ್ತಬ್ದ
ಅದರೊಳು ಗಮನಿಸಿದೆ
ನ್ಯಾಯದ ಕಳವಳ

ಬೈಗುಳದ ಹೊಸ್ತಿಲಲಿ
ಅನ್ನ್ಯಾಯದ ನಾಣ್ಯ,
ಇದಕೆ ಮೈ ತುಂಬಿದ ಲತೆಯ
ಬಳ್ಳಿ ,ನೇಣು ಹಗ್ಗವ
ಕನವರಿಸುತಿದೆ….

ಹೋರಾಡದೆ ಸೋತ ದೇಹ
ಬೆವರ ಗೊಂದಲದಿ
ಪಾನೀಯದೊಳು ಮುಳುಗಿ
ಉಸಿರು ತ್ರಾಣವಿಲ್ಲದೆ
ಪಾಷಾಣವ ಕೋರುತಿದೆ…

ಹಾರೈಕೆಯ ಓಲೆ
ಪ್ರೀತಿಯ ಆರೈಕೆಯಲಿ
ನೀಲಿ ಕತ್ತಲ ಚುಕ್ಕೆಯ
ಸುಂದರ ವರ್ಣಿಸುತಿದೆ…

ಸ್ವ ಅಭಿಪ್ರಾಯದ ಆಲಾಪನೆಗೆ
ಪುಟಿಯುತಿದೆ ತುಳಿವ ಜಾತಿ
ಇದಕೆ ಬಂಡೆ ಕಲ್ಲು
ಜ್ವಾಲವ ಸಿಡಿಸಿದೆ…

ಆವೇಶದ ಕೊಡಲಿ
ಕಟು ಸತ್ತ್ಯವ ಹೊರಬಿಡದೆ
ಹಗಲಿರುಳು ಸಾಣೆ ಹಿಡಿಯುತಿದೆ…

ಸುತ್ತಲೂ ಮುಗಿಬಿದ್ದಿವೆ
ಮೌಡ್ಯವನುಂಡಿಹ
ಕಾಗೆ ಗೂಬೆಗಳು…

ಸಿಗಲಾರದ ನ್ಯಾಯಕೆ
ಕತ್ತಲ ಮೌನ ದಿನ ಎಣಿಕೆ..
ಸೊಕ್ಕು ಮುರಿಯದ ಕಪ್ಪು ಕೊಂಬು ರಾತ್ರಿ ಹಗಲೆನ್ನದೆ
ತಿವಿಯುತಿದೆ…

ಇದರ ನಡುವೆ
ಬೆಳ್ಳಕ್ಕಿಗಳ ಚುಂಬನ
ಬಿಡಲಾರದ ಬಂದನದಿ ಅಪ್ಪಿವೆ
ಪುಸ್ತಕದ ಬರಹಕೆ
ಮಸ್ತಕದ ಬರಹ
ಮುಳುಗಡೆಯ ದಿಗಂತವ ನೋಡುತಿದೆ…

ಮೌನ ಮಾತಾದಾಗ
ಗಡಿಯಾರದ ಮುಳ್ಳು
ನಿಲುಗಡೆಯ ಸೂಚನೆ ಕೊಡುತ್ತಿದೆ,, ನಿನ್ನ ಸಮಯ
ಮುಗಿಯಿತೆಂದು?……


-ಡಾ. ಬಿ ಆರ್ ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
*****