ಖಂಡವಿದೆಕೊ, ಮಾಂಸವಿದೆಕೋ…….. ಇಲ್ಲದ ಚಿತ್ರ! -ಸಿದ್ಧರಾಮ ಕೂಡ್ಲಿಗಿ

ಖಂಡವಿದೆಕೊ, ಮಾಂಸವಿದೆಕೋ…….. ಇಲ್ಲದ ಚಿತ್ರ

ಇತ್ತೀಚೆಗೆ ಫೇಸ್ ಬುಕ್, ವಾಟ್ಸಪ್ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅತಿಹೆಚ್ಚು ಮೆಚ್ಚುಗೆ, ವಿಮರ್ಶೆ, ಹಂಚಿಕೊಳ್ಳಲಾದ ಚಿತ್ರಗಳಲ್ಲಿ ಇದೂ ಒಂದು. ಅಲ್ಲದೆ ಜಗತ್ತಿನಲ್ಲಿ ಅತಿಹೆಚ್ಚು ಮೆಚ್ಚುಗೆ ಗಳಿಸಿ 2022ರ ಅತ್ಯುತ್ತಮ ಚಿತ್ರವೆಂದು ಬಹುಮಾನವನ್ನೂ ಪಡೆದ ಚಿತ್ರವಿದು.

ದುರಂತ ನೋಡಿ ಇಲ್ಲಿ ಸುಂದರತೆ ಇಲ್ಲ, ಪ್ರಕೃತಿಯ ಆಹಾರ ಸರಪಣಿಯ ಒಂದು ಭಾಗವಿದೆ. ಕೆಲವರಿಗೆ ಅಯ್ಯೋ ! ಅನಿಸಬಹುದು, ಕೆಲವರಿಗೆ ಕರುಣೆ ಉಕ್ಕಿಸಬಹುದು, ಕೆಲವರಿಗೆ ಎಂಥ ಕ್ರೂರತೆ ಎನಿಸಬಹುದು, ಆದರೆ ಏನೇ ಅಂದರೂ ಅದೊಂದು ಪ್ರಕೃತಿಯ ನಿಯಮಗಳಲ್ಲೊಂದು ಅಷ್ಟೆ.

ಎಲ್ಲ ಸರಿ ಈ ಚಿತ್ರ ಯಾಕೆ ಇಷ್ಟೊಂದು ಮೆಚ್ಚುಗೆ ಪಡೆಯಿತು ? ಛಾಯಾಗ್ರಹಣದಲ್ಲಿ ಇಂಥ ದೃಶ್ಯಗಳನ್ನೇ “ಬಂಗಾರದ ಸಮಯ” (Golden Time) ಎನ್ನುತ್ತಾರೆ. ಯಾಕೆಂದರೆ ಇಂತಹ ದೃಶ್ಯವನ್ನು ನಾವೇನೇ ಪ್ರಯತ್ನಿಸಿದರೂ ತಾನಾಗಿಯೇ ಒದಗಿಬರದು. ಇಲ್ಲಿ ಛಾಯಾಗ್ರಾಹಕ ಇಂತಹ ’ಬಂಗಾರದ ಸಮಯ’ದ ಅದೃಷ್ಟವಂತನೆಂದೇ ಹೇಳಬಹುದು.

ಇಲ್ಲಿ ಹಸಿದ ಚಿರತೆಯೊಂದು ಬಬೂನ್ ನ್ನು ಬೇಟೆಯಾಡಿದೆ. ಅದು ಸಹಜವೂ ಕೂಡ. ಆದರೆ ಒಂದು ಬಬೂನ್ ನ್ನು ಬೇಟೆಯಾಡಿದ ಚಿತ್ರವಾಗಿದ್ದರೆ ಅದೊಂದು ಯಾರಾದರೂ ಕ್ಲಿಕ್ಕಿಸಬಹುದಾದ ಸಾಮಾನ್ಯ ಚಿತ್ರವೇ ಆಗಿಬಿಡುತ್ತಿತ್ತು. ಚಿತ್ರದ ವಿಶೇಷತೆ ಎಲ್ಲಿದೆಯೆಂದರೆ ತಾಯಿ ಬಬೂನ್ ಚಿರತೆಯ ಬಾಯಲ್ಲಿ ಆಗಲೇ ಸತ್ತಿದೆ. ಆದರೆ “ಬೇಟೆ, ಸಾವು, ಪ್ರಕೃತಿಯ ನಿಯಮ” ಇದಾವುದೂ ಅರಿವೇ ಇರದ ಅದರ ಮರಿಯೊಂದು ತಾಯಿಯನ್ನು ಇನ್ನೂ ಅಪ್ಪಿಕೊಂಡಿದೆ. ಇದೇ ಎಲ್ಲರ ಗಮನ ಸೆಳೆಯುವ ಈ ಚಿತ್ರದ ವಿಶೇಷತೆ. ಮರಿಗೆ ಏನಾಗಿದೆ ಎಂಬುದೂ ಗೊತ್ತಿಲ್ಲ. ಬೇಟೆಯ ಸಂತಸದಲ್ಲಿರುವ ಚಿರತೆಗೆ ತಾನು ಬೇಟೆಯಾಡಿರುವ ಬಬೂನ್ ಒಂದು ತಾಯಿ ಅದಕ್ಕೊಂದು ಮರಿಯಿದೆ ಎಂಬುದೂ ಲೆಕ್ಕಕ್ಕಿಲ್ಲ. ಇದೇ ಈ ಚಿತ್ರದ ’ಸೌಂದರ್ಯ’ ಎಂಬ ಪದ ಬಳಸಲೂ ಯೋಚಿಸಬೇಕಾಗುತ್ತದೆ, ’ಕಾಡಿನ ನಿಯಮ’ ಎನ್ನಬಹುದೇನೋ.


ಅಂದ ಹಾಗೆ ಇಂತಹ ಅದ್ಭುತ ಚಿತ್ರವನ್ನು ಕ್ಲಿಕ್ ಮಾಡಿದವನು ಸ್ಪೇನ್ ನ 55 ವರ್ಷ ಹರೆಯದ ಖ್ಯಾತ ಛಾಯಾಗ್ರಾಹಕ ’ಇಗೋರ್ ಅಲ್ಟುನಾ’ (Igor Altuna). ಇದನ್ನು ಕ್ಲಿಕ್ ಮಾಡಿದ್ದು ಜಾಂಬಿಯಾದ ದಕ್ಷಿಣ ಲುವಾಂಗ್ವಾ ರಾಷ್ಟ್ರೀಯ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ. ಇಗೊರ್ ಅಲ್ಟುನಾ ಈಗಾಗಲೇ ಛಾಯಾಗ್ರಹಣದಲ್ಲಿ ಸಾಕಷ್ಟು ಪ್ರಶಸ್ತಿ, ಮೆಡಲ್ ಗಳನ್ನು ಪಡೆದಿದ್ದಾರೆ. ಅವರ ನೆಚ್ಚಿನ ಛಾಯಾಗ್ರಹಣದ ತಾಣವೆಂದರೆ ಆಫ್ರಿಕಾ.

ಲಂಡನ್ ನ ರಾಷ್ಟ್ರೀಯ ಇತಿಹಾಸ ವಸ್ತು ಸಂಗ್ರಹಾಲಯವು ನಡೆಸಿದ ’2022ರ ಜಾಗತಿಕ ಮಟ್ಟದ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆ’ಯಲ್ಲಿ ಈ ಚಿತ್ರ ಬಹುಮಾನ ಪಡೆದಿದೆ. ಜಾಗತಿಕ ಮಟ್ಟದಲ್ಲಿ ನಡೆಸಲಾದ ಈ ಸ್ಪರ್ಧೆಯಲ್ಲಿ 93 ದೇಶಗಳಿಂದ 38,575 ಪ್ರವೇಶಗಳು ಬಂದಿದ್ದವು. ಅವುಗಳಲ್ಲಿ ಜಗತ್ತಿನ ಜನರ ಆಯ್ಕೆಯನ್ನು ಮಾನದಂಡವನ್ನಾಗಿಸಿಕೊಂಡು ನಿರ್ಣಾಯಕರು ಬಹುಮಾನವನ್ನು ಘೋಷಿಸುತ್ತಾರೆ. ಹಾಗೆ ಆಯ್ಕೆಗೊಂಡ ಅತ್ಯಂತ ಸುಂದರ 25 ಚಿತ್ರಗಳಲ್ಲಿ ಈ ಚಿತ್ರ ಪ್ರಶಸ್ತಿಯನ್ನು ಗಿಟ್ಟಿಸಿದೆ. ಅಂದರೆ ಎಷ್ಟು ಹಂತಗಳನ್ನು ದಾಟಿ ಈ ಚಿತ್ರ ಪ್ರಶಸ್ತಿ ಪಡೆದಿದೆ ಎಂಬುದು ನಿಮಗೆ ಅರಿವಾಗಬಹುದು.

ಇಗೋರ್ ಅಲ್ಟುನಾ ಹೇಳುವಂತೆ ಈ ಚಿತ್ರವನ್ನೇನೋ ಕ್ಲಿಕ್ಕಿಸಿದರು. ನಂತರದ ಕತೆ ಕೇಳಿ. ಚಿರತೆ ತಾಯಿ ಬಬೂನ್ ನ್ನು ಬೇಟೆಯಾಡಿತು ನಂತರ ತನ್ನ ಮರಿ ಚಿರತೆ ಇರುವ ಹತ್ತಿರ ಇದನ್ನು ಒಯ್ದಿತು. ಅಲ್ಲಿ ಮರಿ ಚಿರತೆ ಒಂದು ಗಂಟೆಯವರೆಗೂ ಇನ್ನೂ ಬದುಕಿದ್ದ ಮರಿ ಬಬೂನ್ ಜೊತೆ ಆಟವಾಡಿದೆ. ನಂತರ ಅದನ್ನು ಕೊಂದಿದೆ. ಇದು ತಾಯಿ ಚಿರತೆ, ಮರಿಚಿರತೆಗೆ ಬೇಟೆಯಾಡುವ ವಿಧಾನವನ್ನು ಕಲಿಸಿದ ಹಾಗೆ ಎಂದು ಇಗೋರ್ ಅಂದಿನ ನಡೆದ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಏನೇ ಇರಲಿ, ನನಗೆ ತಕ್ಷಣ ನೆನಪಾದದ್ದು ’ಖಂಡವಿದೆಕೋ ಮಾಂಸವಿದೆಕೋ…..’ ಕತೆ. ಅಲ್ಲಿ ಪುಣ್ಯಕೋಟಿ ಹಸು ತನ್ನ ಕಂದನಿಗೆ ಸಮಾಧಾನಿಸಿ ಹುಲಿಯ ಬಾಯಿಗೆ ಬೀಳಲು ಬರುತ್ತದೆ ಸತ್ಯವಾಕ್ಯವನ್ನು ಪರಿಪಾಲಿಸಲು. ಹುಲಿಯೂ ಪಶ್ಚಾತ್ತಾಪದಿಂದ ನೆಗೆದು ಪ್ರಾಣ ಬಿಡುತ್ತದೆ. “ಸತ್ಯದ” ಮಹತ್ವವನ್ನು ತಿಳಿಸಲು ಆ ಕತೆಯನ್ನು ಹೆಣೆದಿರಬಹುದು. ಆದರೆ ಕಾಡಿನ ನಿಯಮ ’ಸತ್ಯ, ಸುಳ್ಳು, ಪಾಪ, ಪುಣ್ಯ’ ಊಹುಂ ಇದಾವುದನ್ನೂ ಲೆಕ್ಕಿಸುವುದಿಲ್ಲ. ಅಲ್ಲೊಂದು ’ಆಹಾರ ಸರಪಳಿ’ ಇದೆ ಅಷ್ಟೆ. ’ಬೇಟೆಯಾಡಬೇಕು ತಿನ್ನಬೇಕು’ ಅಯ್ಯೋ, ಪಾಪ ಎಂದರೆ ಉಪವಾಸ ಸಾಯಬೇಕಾಗುತ್ತದೆ. ಅಷ್ಟೇ ಬೇರೇನಿಲ್ಲ.


-ಸಿದ್ಧರಾಮ ಕೂಡ್ಲಿಗಿ, ಹವ್ಯಾಸಿ ಛಾಯಾಗ್ರಾಹಕರು, ಕೂಡ್ಲಿಗಿ

One thought on “ಖಂಡವಿದೆಕೊ, ಮಾಂಸವಿದೆಕೋ…….. ಇಲ್ಲದ ಚಿತ್ರ! -ಸಿದ್ಧರಾಮ ಕೂಡ್ಲಿಗಿ

Comments are closed.