ಉಸಿರಾಡುತ್ತಿರುವ ಮೌನದಲಿ
ಕಣ್ರೆಪ್ಪೆ ಸದ್ದಿಲ್ಲದೆ ಬಾಗಿ
ಮೈಗಂಧವ ತೀಡಿ
ನಿನ್ನ ಸನಿಹ ತಂದವು
ಹೊರಗೆ ಸುಳಿಯುವ ಗಾಳಿಗೆ
ನಮ್ಮ ಮಾತ ಬಿಟ್ಟು
ಸ್ಪರ್ಶದಗ್ನಿಗೆ ಮೈಗೊಟ್ಟು
ಬಾ ಹೊರಳುತ ಹೂಬುಟ್ಟಿಗಳಾಗೋಣ
ಇಬ್ಬರೊಳಗೂ ಹೊಂಚಿ ಕೂತ ಸಾವು
ನಮ್ಮ ಸಂಗದುನ್ಮಾದ ನೋಡಿ
ಕೊಂಚ ದೂರ ಸರಿಯಲಿ
ನನಗಂತೂ ಆ ಮಹಾಕಾವ್ಯದ
ದೀರ್ಘ ಯಾತ್ರೆಗಿಂತ
ಈ ಬಾಹುಗಳ ಬಿಗಿದು ಸಡಿಲಿಸಿ
ಹಗೂರ ಮುತ್ತಿನಲೆಯ ಮೇಲೆ
ಮೈದೋಣಿ ಮಾಡಿ
ತೇಲುವ ಇರಾದೆ
ಸಾಕಿಷ್ಟು ಪೀಠಿಕೆ
ಸಂಕೋಚವ ಸಡಿಲಿಸು
ಒಂದು ಸಣ್ಣ ಕತೆಯಾಗಿ
ತೀವ್ರ ಬದುಕೋಣ
-ಮಲ್ಲಿಕಾರ್ಜುನಗೌಡ ತೂಲಹಳ್ಳಿ, ದಾವಣಗೆರೆ
*****