ಅನುದಿನ‌ ಕವನ-೭೮೬, ಕವಿಯಿತ್ರಿ: ಶೋಭ ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಭಾವಾಂತರಂಗ

ಕರ್ನಾಟಕ ಕಹಳೆ ಡಾಟ್ ಕಾಮ್ ಸಾಹಿತ್ಯ ಬಳಗದಲ್ಲಿ ಸದಾ ಸಕ್ರೀಯರಾಗಿರುವ ಹೂವಿನಹಡಗಲಿಯ ಕವಿಯಿತ್ರಿ ಶ್ರೀಮತಿ ಶೋಭ ಪ್ರಕಾಶ್ ಮಲ್ಕಿಒಡೆಯರ್ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು‌ ಅರ್ಥಪೂರ್ಣವಾಗಿ  ಅಚರಿಸಿಕೊಂಡಿದ್ದಾರೆ.  ಸೋಗಿಯಲ್ಲಿ ಜರುಗಿದ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ಪತಿ, ಹಿರಿಯ ಸಾಹಿತಿ ಪ್ರಕಾಶ್ ಮಲ್ಕಿಒಡೆಯರ್ ಅವರೊಂದಿಗೆ ಪಾಲ್ಗೊಂಡು, ವಿವಿಧ ಸ್ಪರ್ಧೆಗಳಲ್ಲಿ‌ ವಿಜೇತರಾದವರಿಗೆ ಬಹುಮಾನ ವಿತರಿಸಿ ವಿಶಿಷ್ಟವಾಗಿ ಆಚರಿಸಿ ಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಶೋಭ ಅವರ ಭಾವಾಂತರಂಗ ಕವಿತೆಯನ್ನು ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದೆ.
(ಸಂಪಾದಕರು)


👇🎂🍀🌺💐🎂

ಭಾವಾಂತರಂಗ

ಬೆಳದಿಂಗಳೆ ಬಂದು ಸೋಕಿ ಕಣ್ಣ ಕಾಂತಿ ತುಂಬಿದೆ
ಸಿಹಿಜೇನು ತಾನೆ ಇಂದು ಮಕರಂದದಿ ಜಿನುಗುತಿದೆ !

ಝಳು – ಝಳು ನಾದ ನದಿಯು ಸಂಗೀತದ ಶಿರವೇರಿದೆ
ಬಿರಿದ ಮೊಗ್ಗು ಸಗ್ಗದಿ ತನ್ನಿರುವನು ಸೂಚಿಸಿದೆ !

ಇಂಪು ಧ್ವನಿಯ ಕೊಂಕು ಕೊರಳಲಿ ಕುಹೂ – ಕುಹೂ ತಂಪಿದೆ
ನವಿಲು ನಿನ್ನ ಬಳಕುವ ಹೆಜ್ಜೆಗೆ ಗರಿ ಬಿಚ್ಚಿ ನಲಿಯುತಿದೆ !

ಇಬ್ಬನಿ ನಿನ್ನ ಮೊಗದಲಿ ಸೂಸಿ ಹಾಲು ಸುರಿದ ಹಾಗಿದೆ
ತಬ್ಬಿದ ಮರ – ಬಳ್ಳಿ ಕೂಡಾ ತೊನೆದು ತೂಗಿ ಕರೆದಂತಿದೆ !

ನಿನ್ನ ರಾಗಾಲಾಪನೆ ನನ್ನನ್ನೇ ನಾನು ಮರೆತಂತಿದೆ
ರಾಗ, ತಾಳ, ಭಾವಗಳು ಮೇಳೈಸಿ ಯುಗಳ ಗೀತೆಯ ಹಾಡಿದೆ !

ಇಂದು ಏಕೊ ಮೌನ ಕವಿದು ಮೊಗದಿ ನಗುವ ಕಸಿದಿದೆ
ಭಾವದ ಹೊನಲಿನಲಿ ಮಾತು ಮೌನವಾದಾಗ ಉಸಿರು ಕುಸಿದಂತೆ
ಭಾಸವಾಗುತ್ತಿದೆ.

  • -ಶೋಭಾ ಮಲ್ಕಿ ಒಡೆಯರ್ 🖊️                   ಹೂವಿನ ಹಡಗಲಿ