ಸರ್ಕಾರಿ ಶಾಲೆಗಳೂ ಹೀಗಾದರೆ ಎಂಥ ಚಂದ! -ವೀರಣ್ಣ ಮಡಿವಾಳರ, ಸಾಹಿತಿ,ಅಧ್ಯಾಪಕ, ನಿಡಗುಂದಿ, ಬೆಳಗಾವಿ ಜಿ.

ಇದು ಹುಲಕೋಟಿಯ ಕೆ.ಎಚ್. ಪಾಟೀಲ್ ಪ್ರೌಢ ಶಾಲೆ. ನಮ್ಮ ಗದಗ ಜಿಲ್ಲೆಯಲ್ಲಿ ಇಂಥದೊಂದು ಶಿಕ್ಷಣ ಸಂಸ್ಥೆ ಇದೆ ಎಂಬುದು ಹೆಮ್ಮೆಯಾದರೂ ಸರ್ಕಾರಿ ಶಾಲೆಗಳೂ ಹೀಗಾದರೆ ಎಷ್ಟು ಚಂದವಲ್ಲವೇ, ಎಷ್ಟು ಬಡಮಕ್ಕಳಿಗೆ ಅರ್ಥಪೂರ್ಣ ಬದುಕು ಕಟ್ಟಿಕೊಡಬಹುದಲ್ಲವೆ ಎಂಬ ಆಶಾದಾಯಕ ಕೊರಗು ಮತ್ತೊಂದು ಕಡೆ ನನ್ನ ಹೃದಯದ ಕೋಣೆಯಲ್ಲಿ ಕುಣಿಯುತ್ತಿದೆ.                                 ನಾನು ಲಂಡನ್, ಕೆನಡಾ, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್ಸ್, ಸದ್ಯಕ್ಕೆ ದೆಹಲಿಗಳಲ್ಲಿ ಇಂಥ ಶಿಕ್ಷಣ ಸಂಸ್ಥೆ ಗಳನ್ನ online ನಲ್ಲಿ ನೋಡಿ, ವರ್ಚ್ಯುವಲ್ ಜಗತ್ತಿನ ಬಗ್ಗೆ, ಅದು ಹುಟ್ಟಿಸುವ ಕನಸುಗಳ ಬಗ್ಗೆ ಅಚ್ಚರಿಪಟ್ಟಿದ್ದೇನೆ, ಬೆರಗಾಗಿದ್ದೇನೆ.

ಇಂದು ಆಕಸ್ಮಿಕವಾಗಿ ನನ್ನ ತಂಗಿಯ ಮಗ ವಿಕಾಸ ಮಡಿವಾಳರನನ್ನು ನೋಡಲು ದುಂದೂರಿಗೆ ಬಂದಿದ್ದೆ. ನನ್ನ ತಂಗಿ ಮದುವೆಯಾದಾಗಿನಿಂದಲೂ ಅವರ ಊರಿಗೆ ಹೋಗಿರಲಿಲ್ಲ. ಆದರೆ ಆಕೆಯ ಮಗ ವಿಕಾಸ ಅದ್ಭುತ ಪ್ರತಿಭಾವಂತ. ಸೊಗಸಾಗಿ ಹೃದಯಕ್ಕಿಳಿಯುವ ಹಾಗೆ ರೀಲ್ಸ್ ಮಾಡುತ್ತಾನೆ. ಅವನ ಆ ಪುಟ್ಟ ದೇಹದ ಆ ಪುಟ್ಟ ಬಾಯಲ್ಲಿ ಅವನ ಹೃದಯದಾಳದಿಂದ ಬರುವ ವಚನಗಳು ಎಂಥವರನ್ನೂ ಮುಗ್ಧರನ್ನಾಗಿಸುತ್ತವೆ. ಸಿದ್ದೇಶ್ವರ ಶ್ರೀಗಳ ಕುರಿತು ಅವನು ಮಾಡಿರುವ ಒಂದು ವಿಡಿಯೋ ವನ್ನ ಇದುವರೆಗೆ ಏಳೂವರೆ ಲಕ್ಷಜನ ನೋಡಿದ್ದಾರೆ ಮೆಚ್ಚಿದ್ದಾರೆ. ಅವನನ್ನ ನೋಡಬೇಕು, ಮಾತಾಡಿಸಬೇಕು, ನನ್ನದೇ ಕರುಳಬಳ್ಳಿಗೆ ಹರಸಬೇಕು, ಅವನಿಗೂ ಸ್ವಲ್ಪ ಏನಾದರೂ ಹೇಳಿಕೊಡಬೇಕು ಎಂಬ ಹಂಬಲದಲ್ಲಿ ದುಂದೂರಿಗೆ ಬಂದಿದ್ದೆ. ಪ್ರೀತಿ ಮತ್ತು ಮಮತೆಯಿಂದ ತಮ್ಮೂರಿಗೆ ಬರಮಾಡಿಕೊಂಡ ನನ್ನ ಮಾವ ಸಂತೋಷ ಮಡಿವಾಳರ ಮತ್ತು ತಂಗಿ ಸವಿತಾ ಅಪರೂಪದ ಆತಿಥ್ಯ ನೀಡಿದರು. ವಿಕಾಸನ ಜೊತೆ ಸ್ವಲ್ಪ ಹೊತ್ತು ಕ್ವಾಲಿಟಿ ಟೈಮ್ ಕಳೆದೆ. ಅವನ ಹೊಸ ಹೊಸ ಡೈಲಾಗ್ ಗಳನ್ನ ಕೇಳಿ ಖುಷಿಪಟ್ಟೆ. ಆ ಪುಟ್ಟ ಹೃದಯದ ಮುಗ್ಧತೆಗೆ ಮಾರುಹೋದೆ.

ಹೀಗೆ ಅಲ್ಲಿಂದ ವಾಪಸ್ ಬರುವಾಗ ಹುಲಕೋಟಿಯ ಈ ಕನಸಿನ ಶಾಲೆ ಕಣ್ಣಿಗೆ ಬಿತ್ತು. ಕಣ್ಣುತುಂಬಿ ಬಂತು. ಬಾಗಿಲಲ್ಲೇ ನಿಂತು ನನ್ನ ಮಾವನ ಕಡೆಯಿಂದ ಫೋಟೊ ತೆಗೆಸಿಕೊಂಡೆ. ಖಾಸಗಿ ಶಾಲೆ ಒಳಗಡೆ ಹೋಗಲು ಅನುಮತಿ ಇದೆಯೋ ಇಲ್ಲವೋ ಎಂಬ ಅನುಮಾನದಿಂದ ಬಾಗಿಲಲ್ಲೇ ನಿಂತು ಮನಸಾರೆ ನೋಡಿಕೊಂಡು ವಾಪಸ್ ನನ್ನ ದಾರಿ ಹಿಡಿದೆ.

ನನ್ನ ಆಳವಾಗಿ ಸೆಳೆದದ್ದು ಕಲಕಿದ್ದು ಈ ಕಟ್ಟಡವಲ್ಲ. ಅಲ್ಲಿನ ಮಕ್ಕಳಿಗೆ ದೊರೆಯಬಹುದಾದ ಶಿಕ್ಷಣದ ಗುಣಮಟ್ಟದ ಬಗ್ಗೆ. ಇಂಥ ಶಾಲೆಯಲ್ಲಿ ಹೆಜ್ಜೆ ಇಡಬೇಕಾದರೆ ಆ ಮಗುವಿನ ಮನಸ್ಸಿನಲ್ಲಿ ಅದೆಂಥ ಸ್ವವಿಶ್ವಾಸ ಹುಟ್ಟಬಹುದು. ಅದೆಷ್ಟು ಎತ್ತರಕ್ಕೆ ಅಲ್ಲಿನ ಮಕ್ಕಳು ಬೆಳೆಯಬಹುದು ಎಂಬ ನನ್ನ ಕಲ್ಪನೆ ನನ್ನ ಬಹುವಾಗಿ ಕಂಗೆಡಿಸಿತು.

ನನ್ನ ಪ್ರಾರ್ಥನೆ ಇಷ್ಟೆ. ನಾನು ಬಯಸುವ ಸಂಪನ್ಮೂಲ ಮತ್ತು ವರುಷಕ್ಕೆ ಮೂವತ್ತು ಮಕ್ಕಳನ್ನ ನನಗೆ ಕೊಡಿ. ಅದರಲ್ಲಿ ಒಬ್ಬನನ್ನಾದರೂ ನನಗಿಂತಲೂ ಹೆಚ್ಚು ಪ್ರತಿಭಾವಂತನನ್ನಾಗಿಸುವೆ. ಇನ್ನೂ ಇಪ್ಪತ್ತೊಂಭತ್ತು ಮಕ್ಕಳಿಗೆ ಅವರು ಬಯಸಿದ ಬದುಕು ಸಿಗಲು ನಾನು ಬೆವರು ಹರಿಸುವೆ.

ಸರಕಾರಿ ಶಾಲೆಗೆ ಸೇರಿ ಹದಿನೈದು ವರುಷಗಳು ಕಳೆದವು. ಸಾಲವಿಲ್ಲದಿದ್ದರೆ ವಾಲಂಟರಿ ರಿಟೈರ್ಮೆಂಟ್ ತೆಗೆದುಕೊಂಡು ಮೂವತ್ತು ಮಕ್ಕಳನ್ನ ತೆಗೆದುಕೊಂಡು ಇಂಥದೊಂದು ಸಂಸ್ಥೆ ಕಟ್ಟಿ ಅವರಲ್ಲಿ ನಾನು ಬದುಕಿರುವುದರೊಳಗಾಗಿ ಒಂದೈದು ಜನರನ್ನಾದರೂ ಮಹೋನ್ನತ ವ್ಯಕ್ತಿತ್ವಗಳನ್ನಾಗಿ ರೂಪಿಸುವವನಿದ್ದೆ.

ಈಗಲೂ ಆ ಪ್ರಯತ್ನ ಜೀವಂತವಾಗಿದೆ.

ನಿಮ್ಮ ಮಕ್ಕಳು ವಿಶ್ವಪ್ರತಿಭೆಗಳಾಗಬೇಕೆಂಬ ಕನಸುಕಾಣಿ. ಮಕ್ಕಳ ಕಣ್ಣಿನ ಮೂಲಕ ನಿಮ್ಮ ಕನಸನ್ನೂ ನನಸಾಗಿಸಿಕೊಳ್ಳಿ.

ಯಾರಿಗಾದರೂ ಮಕ್ಕಳ ಬಗ್ಗೆ ಮಹೋನ್ನತ ಕನಸುಗಳಿದ್ದರೆ, ಅವುಗಳನ್ನ ನನಸಾಗಿಸುವ ದಾರಿ ತಿಳಿಯದೆ ಹೋದರೆ ಗೊಂದಲಗಳಿದ್ದರೆ ನಾನು ಖಂಡಿತ ನಿಮಗೆ ಸಹಾಯ ಮಾಡಬಲ್ಲೆ.

ಆದರೆ ನನ್ನ ಬಿಡುವಿನ ಅವಧಿಯಲ್ಲಿ ಮಾತ್ರ. ಮೊದಲು ಮೆಸೇಜ್ ಮಾಡಿ, ಸಮಯ ಹೊಂದಿಸಿಕೊಂಡು ಕನಸುಕಟ್ಟೋಣ. ಅಗತ್ಯಬಿದ್ದರೆ ನಿಮ್ಮ ಮಕ್ಕಳನ್ನ ಭೇಟಿಯಾಗಲೂ ನಾನು ಸಿದ್ಧ.

ಬನ್ನಿ ನಮ್ಮ ಮಕ್ಕಳಿಗೆ ಅರ್ಥಪೂರ್ಣ ಮಹೋನ್ನತ ಸಂಭ್ರಮದ ಸಾರ್ಥಕ ಬದುಕು ಕಟ್ಟೋಣ.

– ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ ಜಿ.
ಮೊಬೈಲ್: 9972120570