ಬಳ್ಳಾರಿ,ಫೆ.28: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಂಬಂಧಿಸಿದ ಮತಗಟ್ಟೆ ಕೇಂದ್ರಗಳ ಪರಿಶೀಲನೆ, ಯುವಕ-ಯುವತಿ ಮತದಾರರ ಸೇರ್ಪಡೆ ಹಾಗೂ ಇತರೆ ಪೂರಕ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರರ ಗುರುತಿನ ಚೀಟಿ ನೊಂದಣಿಗೆ ಹೊಸದಾಗಿ ಸೇರ್ಪಡೆ ಹೊಂದುತ್ತಿರುವವರ ಹಾಗೂ ತಿದ್ದುಪಡಿ ಮಾಡಬಯಸುವವರ ದಿನವಾರು ಮಾಹಿತಿಯನ್ನು ತಪ್ಪದೇ ನೊಂದಾಯಿಸಬೇಕು. ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಕ್ರಮ ವಹಿಸಬೇಕು. ಈ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾ ನೊಂದಣಿ ಅಧಿಕಾರಿಗಳೇ ನೋಡಿಕೊಳ್ಳಬೇಕು ಎಂದರು.
ಕ್ಷೇತ್ರವಾರು ದಾಖಲೆ ಪರಿಶೀಲನಾ ಹಂತದಲ್ಲಿ ಮರಣ ಹೊಂದಿದವರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಅವರ ಮನೆಯ ವಾರಸುದಾರರಿಂದ ಮರಣ ಪ್ರಮಾಣ ಪತ್ರ ದಾಖಲೆ ಪಡೆದು, ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಮೇರೆಗೆ ಮತದಾರರ ಪಟ್ಟಿಯಿಂದ ಕೈಬಿಡಬಹುದಾಗಿದೆ ಎಂದರು.
ಸಾರ್ವತ್ರಿಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಪ್ರಸ್ತಕ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇಕಡ ನೂರರಷ್ಟು ಮತದಾನ ಪ್ರಕ್ರಿಯೆ ಹೊಂದಲು ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಇವಿಎಂ, ವಿವಿ ಪ್ಯಾಟ್ ಮತ್ತು ಚುನಾವಣಾ ಪ್ರಕ್ರಿಯೆಯ ಕುರಿತು ಜನರಿಗೆ ಅರಿವು ಮೂಡಿಸಲು ಹಳ್ಳಿಗಳಲ್ಲಿ ಹಾಗೂ ಜಾತ್ರಾ ವಲಯಗಳಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಬೇಕು ಎಂದರು.
80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಹಾಗೂ ವಿಶೇಷ ಚೇತನರಿಗೆ ಮತದಾನ ಮಾಡಲು ಆಯಾ ಮತಗಟ್ಟೆಗೆ ತೆರಳಲು ವಾಹನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಅಧಿಕಾರಿಗಳು ಅಂತವರನ್ನು ಗುರುತಿಸುವಂತೆ ತಿಳಿಸಿದರು.
ಅಂಚೆ ಮತದಾನ: 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಕಲ ವಿಶೇಷ ಚೇತನರಿಗೆ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಆಗದೇ ಇದ್ದಲ್ಲಿ, ಅವರು ಮನೆಯಲ್ಲಿಯೇ ಇದ್ದುಕೊಂಡು ಅಂಚೆ ಮತದಾನ ಮೂಲಕ ಮತದಾನ ಮಾಡಬಹುದಾಗಿದೆ. ಈ ವಿಧಾನವನ್ನು ಪ್ರಸ್ತಕ ಸಾಲಿನ ಚುನಾವಣೆಯಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗುತ್ತಿದೆ ಎಂದರು.
ಮತಗಟ್ಟೆ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಶೌಚಾಲಯ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಇತರೆ ರಿಪೇರಿ ಕಾಮಗಾರಿಗಳನ್ನು ಸರಿಪಡಿಸುವಂತೆ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ ಅವರು, ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ನೊಂದಾಯಿಸಿಕೊಂಡವರಿಗೆ ಮತದಾರರ ಗುರುತಿನ ಚೀಟಿ ತಲುಪಿದೆಯೇ ಎಂಬುದರ ಮಾಹಿತಿ ಪಡೆದುಕೊಂಡರು. ಮತದಾರರ ನೊಂದಣಿ ಪ್ರಕ್ರಿಯೆಯಲ್ಲಿ ತೊಂದರೆಯಾದಲ್ಲಿ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಮತಗಟ್ಟೆ ಕೇಂದ್ರಗಳೆಂದು ಗುರುತಿಸಲ್ಪಟ್ಟ ಸರ್ಕಾರಿ ಕಟ್ಟಡಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಇಲ್ಲದೇ ತೆರವುಗೊಳಿಸುವಂತಿಲ್ಲ. ತೆರವುಗೊಳಿಸಿದ್ದೇ ಆದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ಸೇರಿದಂತೆ ಜಿಲ್ಲಾ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
—-