ಒಂದು ಅನನ್ಯ ಭೇಟಿ
ಬಹು ದೀರ್ಘ ಕಾಲದ ನಂತರ
ಒಂದು ಆಕಸ್ಮಿಕ ದಿನ
ಆಕಸ್ಮಿಕವಾಗಿಯೇ
ಭೇಟಿಯಾದೆವು
ಮುಖದಲ್ಲಿ ಕಿರುನಗೆಯ
ಬೆಳುದಿಂಗಳು
ಎದೆಯ ತುಂಬೆಲ್ಲ
ಹಳೆಯ ಭಾವಗಳ
ಸುಳಿಗಾಳಿ
ಮಾತುಗಳೆಲ್ಲ ಹರಿವ
ನದಿಯಾಗಲೆಂದು
ಧುಮ್ಮಿಕ್ಕುವ
ಜಲಪಾತಗಳಾಗಲೆಂದು
ಇಷ್ಟು ದಿನ ತಡೆದ ಮಳೆ
ಹಳೆಯ ಕೊಳೆಯನೆಲ್ಲ
ಕೊಚ್ಚಿ ಹೋಗಲೆಂದು
ದುಗುಡವನೊತ್ತ ಮನ
ಹಗುರಾಗಲೆಂದು…
ಹೀಗೆ
ಒಂದು ಏಕಾಂತದಲ್ಲಿ…
ಕೇವಲ
ಮಾತಿಗಾಗಿ ಹಂಬಲಿಸಿ
ಕೂತಿದ್ದೆವು.
ಏನೊಂದೂ ಮಾತಿಲ್ಲ! ಬರೀ ಮೌನ…
ಆದರೂ
ಮಾತಿನ ಹಸಿವು ನೀಗಿತ್ತು!
ಸೂರ್ಯ ತನ್ನಷ್ಟಕ್ಕೇ ತಾನು
ಬಂದು ಹೋದ
ಇನ್ನೇನು ಚಂದಿರ
ಬರುವ ಸರದಿ
ಮೆಲ್ಲಗೆ
ಮಬ್ಬು ಜಾರುತ್ತಿತ್ತು
ಹಕ್ಕಿಗಳು ಚಿಟ್ಟೆಗಳು
ಗೂಡು ಸೇರುವ ಹೊತ್ತು
ಸಂತೃಪ್ತ ಭಾವ ಹೊತ್ತು
ಹೊರಡುವ ವೇಳೆ…
ಇಬ್ಬರ ಕಂಗಳಲ್ಲೂ
ಸಾವಿರ ತಾರೆಗಳ ಹೊಳಪು!
ಮನದ ದುಗುಡ ನೀಗಿ
ಎದೆಯಲ್ಲೀಗ ನಿರಾಳ!
-ವೀರೇಂದ್ರ ರಾವಿಹಾಳ್, ಬಳ್ಳಾರಿ
*****