ಶಿರಹಟ್ಟಿಯಲ್ಲಿ ಹೋಳಿ: ತಮಟೆ ಬಡಿದು ಸಂಭ್ರಮಿಸಿದ ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ)

ಗದಗ, ಮಾ.8: ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರು ಬುಧವಾರ ತಮ್ಮ ಪ್ರಾಥಮಿಕ ಶಾಲೆಯ ಗೆಳೆಯರೊಡನೆ ಸಂಭ್ರಮ, ಸಡಗರಗಳಿಂದ ಆಚರಿಸಿದರು.
ಮನಂ ಅವರು ಕಾಮನ ಮೆರವಣಿಗೆಯಲ್ಲಿ
ಜಾನಪದ ತಾಳವಾದ್ಯವಾದ ಹಲಗಿ ಬಾರಿಸುತ್ತಾ ಭಾಗವಹಿಸಿ ಗಮನ ಸೆಳೆದರು.
ಪಟ್ಟಣದ ಹಲವು ಬಾಲಕರು ಮನಂ ಅವರಿಗೆ ಸಾಥ್‌ನೀಡಿದರು. ಬಾಲ್ಯದ ಗೆಳೆಯರು ಇವರ ಹಲಗಿ ತಾಳಕ್ಕೆ ಹೆಜ್ಜೆ ಹಾಕಿ ಖುಷಿ ಪಟ್ಟರು.
ಬೆಳಿಗ್ಗೆಯಿಂದ ಮಧ್ಯಾಹ್ನ ರವರೆಗೆ ಪರಸ್ಪರ ಬಣ್ಣ ಎರಚಿ ಹರ್ಷಿಸಿದರು. ಮನಂ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಆದರೆ ಇವರು ತಮ್ಮ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾಭ್ಯಾಸವನ್ನು ಶಿರಹಟ್ಟಿ, ಮುಂಡರಗಿ, ಧಾರವಾಡದಲ್ಲಿ ಪೂರೈಸಿದ್ದಾರೆ.
ಎರಡು ವರ್ಷಗಳ‌ ಹಿಂದೆ ಬಳ್ಳಾರಿ ವಲಯದ ಐಜಿಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೂ ಮನಂ ಅವರು ಉತ್ತರ ಕರ್ನಾಟಕದ ತಮ್ಮ ಬಾಲ್ಯದ ಗೆಳೆಯರನ್ನು ಬಳ್ಳಾರಿಗೆ ಆಹ್ವಾನಿಸಿ ಉತ್ತರ ಕರ್ನಾಟಕದ ಮಾದರಿಯಲ್ಲಿ ಇಡೀ ದಿನ ಬಣ್ಣದಾಟ ಆಡಿ ಹರ್ಷಿಸಿದ್ದರು ಎಂದು ಕರ್ನಾಟಕ‌ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ತಿಳಿಸಿದ್ದಾರೆ.
*****