ನಮಗೂ ಟಿಕೆಟ್ ಕೊಡಿ……!
ನಮಗೂ ಟಿಕೆಟ್ ಕೊಡಿ ಸ್ವಾಮಿ
ನನಗೆ ಕೊಡದಿದ್ದರೂ ಚಿಂತೆಯಿಲ್ಲ
ಚುನಾವಣೆಗೆ ಸ್ಪರ್ಧಿಸಲು
ನನ್ನ ಮಗಳು, ಅಳಿಯ,
ಮಗ, ಸೊಸೆ,
ಅಣ್ಣ, ತಮ್ಮ
ಎಲ್ಲರಿಗೂ ಟಿಕೆಟ್ ಕೊಡಿ ಸ್ವಾಮಿ
ನಮ್ಮದು ರಾಜ ಮಹಾರಾಜರಂತೆ
ವಂಶಪರಂಪರೆಯ ಆಡಳಿತವಲ್ಲ
ಅದಕ್ಕೇ ನಮ್ಮ ಕುಟುಂಬದವರಿಗೆ
ಚುನಾವಣೆಗೆ ನಿಲ್ಲಲು
ಟಿಕೆಟ್ ಕೊಡಿ ಸ್ವಾಮಿ
ಜನರ ಸೇವೆಯೇ
ದೇವರ ಸೇವೆಯೆಂದು
ತಿಳಿದವರು ನಾವು
ಹಗಲಿರುಳೂ ಅವರಿಗಾಗಿ
ಕೊರಗಿದವರು ನಾವು
ದಯವಿಟ್ಟು
ಚುನಾವಣೆಗಾಗಿ
ಟಿಕೆಟ್ ಕೊಡಿ ಸ್ವಾಮಿ
ಕೆಲವೇ ಸಾವಿರ ಕೋಟಿ
ಹಣವನ್ನು ಹೊಂದಿದ
ಕಡುಬಡವರು ನಾವು
ಬಡತನ, ಕಷ್ಟಗಳನ್ನು
ಸೋಸಿ ಸೋಸಿ
ಜನರಿಗಾಗಿಯೆ ಬೆವರು
ಹರಿಸಿದವರು ನಾವು
ದಯವಿಟ್ಟು ಚುನಾವಣೆಗೆ
ಸ್ಪರ್ಧಿಸಲೇಬೇಕಾಗಿದೆ
ಟಿಕೆಟ್ ಕೊಡಿ ಸ್ವಾಮಿ
ಮತದಾರ ಪ್ರಭು
ಯಾವ ಪಾತಾಳದಲ್ಲಿಯೇ
ಅಡಗಿದ್ದರೂ ಹುಡುಕಿ
ಅವನ ತಲೆ ಸವರಿ
ಮಿದುಳಿರದಂತೆ ಮಾಡಿ
ಗೆದ್ದೇ ಗೆಲ್ಲುತ್ತೇವೆ
ಒಮ್ಮೆ ಟಿಕೆಟ್ ಕೊಟ್ಟು ನೋಡಿ
ದಯವಿಟ್ಟು ಟಿಕೆಟ್ ಕೊಡಿ ಸ್ವಾಮಿ
ಛೇಛೇ
ಬಡವ, ಕೂಲಿ ಕಾರ್ಮಿಕ
ಗುಡಿಸಲ ವಾಸಿ
ಅನಾಥ, ಅಲೆಮಾರಿ
ಇವರೆಲ್ಲ ಸ್ಪರ್ಧಿಸಿ
ಗೆಲ್ಲಲಾಗುವುದೇ
ನೀವೇ ಯೋಚಿಸಿ
ದಯವಿಟ್ಟು ಟಿಕೆಟ್ ಕೊಡಿ ಸ್ವಾಮಿ
ಜಾತಿ, ಧರ್ಮ
ಕರುಣೆ, ಅನುಕಂಪ
ಎಲ್ಲ ತಂತ್ರಗಳ ಬಳಸಿ
ಗೆಲ್ಲುವ ತಂತ್ರಗಳು
ನಮಗೆಲ್ಲ ಗೊತ್ತು
ಅದಕ್ಕೇ ದಯವಿಟ್ಟು
ಟಿಕೆಟ್ ಕೊಡಿ ಸ್ವಾಮಿ
ನನ್ನ ಕುಟುಂಬದ ಜೊತೆ
ನನಗೆ ಟಿಕೆಟ್ ಕೊಟ್ಟರೆ
ಈಗಲೂ ಸ್ಪರ್ಧಿಸಬಲ್ಲೆ
ವಯಸ್ಸಾಗಿದೆಯೆನ್ನಬೇಡಿ
ನಿಲ್ಲಲು ಬರದಿದ್ದರೂ
ಕುಳಿತುಕೊಳ್ಳಬಲ್ಲೆ
ಕುಳಿತುಕೊಳ್ಳಲಾಗದಿದ್ದರೂ
ಮಲಗಿಯಾದರೂ ಸ್ಪರ್ಧಿಸಬಲ್ಲೆ
ಹೇಗಾದರೂ ಸರಿಯೇ
ಚುನಾವಣೆಗೆ ಸ್ಪರ್ಧಿಸುವೆ
ದಯವಿಟ್ಟು ಟಿಕೆಟ್ ಕೊಡಿ ಸ್ವಾಮಿ
ನಾನು ನನ್ನ ಕುಟುಂಬದವರು
ಜನರ ಸೇವೆ ಮಾಡಬೇಕಾಗಿದೆ
ಜನರ ಕಣ್ಣೀರನ್ನು ಒರೆಸಬೇಕಾಗಿದೆ
ಅವರ ಕಷ್ಟಗಳನ್ನು ಅರಿತುಕೊಳ್ಳಬೇಕಾಗಿದೆ
ದಯವಿಟ್ಟು ಟಿಕೆಟ್ ಕೊಡಿ ಸ್ವಾಮಿ
ನಮ್ಮ ಬೆಂಬಲಿಗರು
ಹೊರಗೆ ಕಾಯುತ್ತಿದ್ದಾರೆ
ಒಮ್ಮೆ ಯೋಚಿಸಿ ನೋಡಿ
ಕೊಡದಿದ್ದರೆ ನಿಮಗೇ ಸಮಸ್ಯೆ
ಅದಕ್ಕೇ ಮತ್ತೆ ಮತ್ತೆ ಕೇಳುತ್ತಿರುವೆ
ದಯವಿಟ್ಟು ಟಿಕೆಟ್ ಕೊಡಿ ಸ್ವಾಮಿ
ಛೇ ಛೇ ಅಧಿಕಾರದ ಆಸೆ
ಖಂಡಿತ ಇಲ್ಲ ಸ್ವಾಮಿ
ಜನರ ಸೇವೆ ಮಾಡುವುದೊಂದೇ
ನಮ್ಮ ಕುಟುಂಬದ ಗುರಿ
ಹೇಗಾದರೂ ಜನರ ಕಷ್ಟ
ಪರಿಹಾರವಾಗಬೇಕು ಪಾಪ
ದಯವಿಟ್ಟು ಟಿಕೆಟ್ ಕೊಡಿ ಸ್ವಾಮಿ
-ಸಿದ್ಧರಾಮ ಕೂಡ್ಲಿಗಿ
*****