ಬಳ್ಳಾರಿ, ಮಾ.16: ಶಿಕ್ಷಕರ ಪ್ರೀತಿ, ವಿಶ್ವಾಸ ದಿಂದ ಆರು ತಿಂಗಳು ಉತ್ತಮ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ಪೂರ್ವ ವಲಯದ ಪ್ರಭಾರಿ ಬಿಇಓಗಳಾಗಿ ಕಾರ್ಯನಿರ್ವಹಿಸಿದ ಡಯಟ್ ಹಿರಿಯ ಉಪನ್ಯಾಸಕ ಕೆಂಪಯ್ಯ ಬಿಪಿ ಅವರು ಭಾವುಕರಾಗಿ ನುಡಿದರು.
ಬಳ್ಳಾರಿ ತಾಲೂಕು ಸರಕಾರಿ ಶಿಕ್ಷಕರ ಪತ್ತಿನ ಸಹಕಾರ ಸಂಘ, ಬಳ್ಳಾರಿ ತಾಲೂಕು ಸರಕಾರಿ ಶಿಕ್ಷಕರ ಸಂಘ ಸೇರಿದಂತೆ ಸುಮಾರು 18 ವಿವಿಧ ಶಿಕ್ಷಕರ ಸಂಘಟನೆಗಳು ಬುಧವಾರ ಸಂಜೆ ನಗರದ ಡಿಡಿಪಿಐ ಕೌನ್ಸಿಲಿಂಗ್ ಸಭಾಂಗಣದಲ್ಲಿ ಆಯೋಜಿಸಿದ್ದ ಬೀಳ್ಕೋಡುಗೆ ಹಾಗೂ ನೂತನ ಬಿಇಓ ಅವರಿಗೆ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೂರ್ವ ವಲಯದಲ್ಲಿ ಉತ್ತಮವಾಗಿ ಕೆಲಸ ಮಾಡುವ ಶಿಕ್ಷಕರ ಸಮೂಹವೇ ಇರುವುದು ಗೊತ್ತಾಯಿತು. ಎಲ್ಲರ ಪ್ರೀತಿ, ವಿಶ್ವಾಸಗಳಿಸಿ ಇವರಿಂದ ಕೆಲಸ ತೆಗೆದುಕೊಳ್ಳಲಾಯಿತು ಎಂದು ಹೇಳಿದರು.
ಈ ಬಾರಿ ಪರೀಕ್ಷೆ ಹಾಗೂ ಸಾರ್ವತ್ರಿಕ ಚುನಾವಣೆ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸುವ ಸವಾಲು ಶಿಕ್ಷಕರ ಮೇಲಿದೆ. ಎಸ್.ಎಸ್.ಎಲ್ ಸಿಯಲ್ಲಿ ಉತ್ತಮ ಫಲಿತಾಂಶ ನೀಡುವ ಗುರುತರ ಜವಾಬ್ದಾರಿ ಇದೆ ಎಂದರು.
೨೦೧೩ ರಲ್ಲಿ ಸರ್ವ ಶಿಕ್ಷಣ ಅಭಿಯಾನದ (ಎಸ್ ಎಸ್ ಎ) ಅಧಿಕಾರಿಯಾಗಿ ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸಿರುವುದರಿಂದ ಜಿಲ್ಲೆ ಹಾಗೂ ತಾಲೂಕು, ಶಿಕ್ಷಕರು, ಸಂಘ ಸಂಸ್ಥೆಗಳ ಮುಖಂಡರ ಪರಿಚಯ, ಜಿಲ್ಲಾಧಿಕಾರಿ, ಜಿಪಂ ಸಿಇಓ, ಡಿಡಿಪಿಐ ಮಾರ್ಗದರ್ಶನ, ಅಧೀನ ಅಧಿಕಾರಿಗಳು, ಸಿಬ್ಬಂದಿಗಳ ಸಹಕಾರ ಬೆಂಬಲದಿಂದ ಆರು ತಿಂಗಳು ಕಾಲ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದೆ ಎಂದು ತಿಳಿಸಿದರು.
ನೂತನ ಬಿಇಓ ನಯೀಮುರ್ ರಹಮಾನ್ .ಕೆ .ಎಸ್ ಅವರು ಮಾತನಾಡಿ, ತಾವು ಶಿಕ್ಷಕರ ಮಗ, ಶಿಕ್ಷಕರ ಸಮಸ್ಯೆಗಳು ನನ್ನ ಬಾಲ್ಯದಿಂದ ಪರಿಚಯವಿದೆ. ಶಿಕ್ಷಕರ ಸಂಬಳ ತಿಂಗಳ ಮೊದಲ ದಿನವೇ ಆಗುವಂತೆ ಗಮನ ಹರಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ನಿಕಟಪೂರ್ವ ಬಿಇಓ ಕೆಂಪಯ್ಯ ಅವರು
ಆರು ತಿಂಗಳ ಕಾಲ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಜನಪ್ರಿಯರಾಗಿರುವುದನ್ನು ಪ್ರಸ್ತಾಪಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇವರ ಹಾದಿಯಲ್ಲೇ ಹಾಗೂ ವೇಗದಲ್ಲಿ ಕಾರ್ಯನಿರ್ವಹಿಸುವೆನು ಮತ್ತು ಇವರ ಸಹಕಾರ ಪಡೆಯುತ್ತೇನೆ.
ಬಿಆರ್ ಸಿ ಯಲ್ಲಿ ಕಾರ್ಯನಿರ್ವಹಿಸುವದರಿಂದ ಇಲಾಖೆಯ ಒಳ ಹೊರಗು ಅರಿವಿದೆ ಎಂದರು.
ಪೂರ್ವ ವಲಯದ ಶಿಕ್ಷಕರ ಅಧ್ಯಕ್ಷ ರಮೇಶ್ ಅವರು ಮಾತನಾಡಿ, ಕೆಂಪಯ್ಯ ಬಿಪಿ ಅವರ ಚುರುಕು ವ್ಯಕ್ತಿತ್ವ, ಕೆಲಸ ತೆಗೆದುಕೊಳ್ಳುವ ಚಾಕಚಕ್ಯತೆಯನ್ನು ಶ್ಲಾಘಿಸಿದರು. ಎಲ್ಲಾ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ಆದ್ಯತೆ ನೀಡಿದ್ದರು. ಆರು ತಿಂಗಳಲ್ಲಿ ಕಾಮಗಾರಿ ವೇಗ ಪಡೆದಿದ್ದವು ಎಂದು ತಿಳಿಸಿದರು. ನೂತನ ಬಿಇಓ ಅವರು ಶಿಕ್ಷಕರಿಗೆ,
ಶೈಕ್ಷಣಿಕ ಅಭಿವೃದ್ಧಿ ಗೆ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಿರಿಮಲ್ಲಪ್ಪ,
ಕೆಂಪಯ್ಯ ಅವರು ಮೊಬೈಲ್ ನಲ್ಲಿ ಸಮಸ್ಯೆಗಳನ್ನು ಕೇಳಿ ಪರಿಹರಿಸುತ್ತಿದ್ದರು. ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮಗೊಳ್ಳಲು ಪ್ರಯತ್ನಿಸಿದರು ಎಂದರು.
ಪತ್ತಿನಸಹಕಾರ ಸಂಘದ ಅಧ್ಯಕ್ಷ ಪಂಪನಗೌಡ ಅವರು ಮಾತನಾಡಿ, ಕೆಂಪಯ್ಯ ಅವರು ಕಡಿಮೆ ಅವಧಿಯಲ್ಲಿ ಉತ್ತಮವಾಗಿ ನ್ಯಾಯ ಒದಗಿಸಿದರು. ಶೈಕ್ಷಣಿಕ ಅಭಿವೃದ್ಧಿ ಗೆ ಶ್ರಮಿಸಿದರು. ಶೀಘ್ರ ಡಿಡಿಪಿಐಗಳಾಗಿ ಮುಂಭಡ್ತಿ ಪಡೆಯಲಿ ಎಂದು ಹಾರೈಸಿದರು.
ನೂತನ ಬಿಇಓ ನಯೀಮುರ್ ರಹಮಾನ್ .ಕೆ .ಎಸ್.
ಅವರು ಪ್ರಾಮಾಣಿಕ ವ್ಯಕ್ತಿ. ಈ ಹಿಂದೆ ಕಲ್ಲುಕಂಬ, ಬಂಡಿಹಟ್ಟಿ ಪ್ರೌಢಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಪೂರ್ವ ವಲಯವನ್ನು ಮಾದರಿ ವಲಯವನ್ನಾಗಿ ಪರಿವರ್ತಿಸಲಿ ಎಂದು ಆಶಿಸಿದರು.
ಮುಖ್ಯಗುರು ಮೆಹತಾಬ್ ಅವರು ಮಾತನಾಡಿ, ಅಲ್ಪಾವಧಿಯಲ್ಲಿ ಜನಪ್ರಿಯಗಳಿಸಿದವರು ಕೆಂಪಯ್ಯ. ಶಿಕ್ಷಕರ ಸಮುದಾಯ ಮನ ಗೆದ್ದವರು. 153 ಶಾಲೆಗಳಿಗೆ ಭೇಟಿ ನೀಡಿದ್ದಾರೆ. ನೂತನ ಬಿಈಓ ಅವರಿಗೂ ಬಳ್ಳಾರಿ ಸಂಪೂರ್ಣ ಪರಿಚಯವಿದೆ.
ಪ್ರತಿ ಶಾಲೆಗೂ ದೈಹಿಕ ಶಿಕ್ಷಕರು ಬೇಕು. ಅತಿಥಿ ಶಿಕ್ಷಕರನ್ನು ನೇಮಕ ಮಾಡುವಾಗ ದೈಹಿಕ ಶಿಕ್ಷಕರಿಗೂ ಆದ್ಯತೆ ನೀಡಲಿ ಎಂದು ಮನವಿ ಮಾಡಿದರು.
ಎನ್ ಪಿ ಎಸ್ ಹೋರಾಟ ಸಂಘದ ಅಧ್ಯಕ್ಷ ತಿಪ್ಪಾರೆಡ್ಡಿ
ಶಿಕ್ಷಕರು ಕಚೇರಿಗೆ ಅಲೆಯಲು ಅವಕಾಶ ನೀಡಬಾರದು ಎಂದು ಕೋರಿದರು.
ನಂದೀಶ್ ಮಾತನಾಡಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಬಿಇಓ ಅಧಿಕಾರಿಗಳೇ ಪೂರ್ವ ವಲಯಕ್ಕೆ ಲಭಿಸುತ್ತಿದ್ದಾರೆ. ಶಾಲೆಯ ವಾಸ್ತವಾಂಶಗಳನ್ನು ಅರಿತು ಕಾರ್ಯ ನಿರ್ವಹಿಸಿದ್ದಾರೆ ಎಂದು ಪ್ರಶಂಸಿಸಿದರು.
ಜಿಪಿಟಿ ವೀರೇಶ್ ಅವರು ಮಾತನಾಡಿ ಕೆಂಪಯ್ಯ ಅವರು ಆರು ತಿಂಗಳುಗಳ ಕಾಲ
ತುಂಬಾ ವೇಗವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಜಿಲ್ಲಾ ನೌಕರರ ಸಂಘದ ಜಂಟಿ ಕಾರ್ಯ ದರ್ಶಿ ಹರಿ ಪ್ರಸಾದ್ ಅವರು, ಕೆಂಪಯ್ಯ ಅವರು
ಶಿಕ್ಷಕ ಸ್ನೇಹಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಗುರು ಯರಿಸ್ವಾಮಿ ಮಾತನಾಡಿ, ಕೆಂಪಯ್ಯ ಅವರದು ಪಾದರಸದ ವ್ಯಕ್ತಿತ್ವ. ಸಿಆರ್ ನಿಯಮಗಳನ್ವಯ ಭಡ್ತಿ ನೀಡಬೇಕು ಎಂದರು.
ಸಾವಿತ್ರಿಭಾಯಿ ಶಿಕ್ಷಕಿಯರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಕೆ. ಲಕ್ಷ್ಮಿದೇವಿ ಅವರು ಮಾತನಾಡಿ ಕೆಂಪಯ್ಯ ಅವರು ಶಾಲೆಗೆ ಭೇಟಿ ನೀಡಿದಾಗ ತಮ್ಮ ತರಗತಿ ಕೊಠಡಿಗೆ ಆಗಮಿಸಿ ಕಲಿಕೆಯ ಪೂರಕ ಪರಿಕರಗಳನ್ನು ಮೆಚ್ಚಿಕೊಂಡು ಪ್ರೋತ್ಸಾಹಿಸಿದರು ಎಂದು ತಿಳಿಸಿದರು.
ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸೇರಿದಂತೆ ಹಲವರು ಮಾತನಾಡಿದರು.
ಸನ್ಮಾನ: ವಿವಿಧ ಸಂಘಟನೆಗಳ ಮುಖಂಡರು ನಿಕಟಪೂರ್ವ ಬಿಇಓ ಕೆಂಪಯ್ಯ ಮತ್ತು ನೂತನ ಬಿಇಓ ನಯೀಮುರ್ ರಹಮಾನ್ .ಕೆ .ಎಸ್.
ಅವರನ್ನು ಸತ್ಕರಿಸಿ ಗೌರವಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
*****