ಅನುದಿನ ಕವನ-೮೦೮, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್, ಕಾವ್ಯಪ್ರಕಾರ: ಗಜಲ್

ಗಜಲ್

ಚಂದಿರನಿರದ ಇರುಳಲ್ಲಿ ನಲ್ಲನ ಮನವನು
ಸುತ್ತಿದವಳು ನೀನು
ದುಂದುಭಿಯ ನಾದದಲಿ ನಿಷ್ಕಲ್ಮಷ ಪ್ರೇಮವ
ಕೆತ್ತಿದವಳು ನೀನು

ದುಂಬಿಗಳ ಲೋಕದಿ ಅಪರೂಪದ ಪಾರಿಜಾತ
ಹೂವಾಗಿ ಇರುವೆಯೇಕೆ
ಚುಂಬನವ ನೀಡುತ ಪ್ರಣಯದ ಕನಸನ್ನು
ಬಿತ್ತಿದವಳು ನೀನು

ವಿರಹಿಣಿಯಾಗಿ ಇಂದ್ರವನದಿ ತಿರುಗುತ ಸದಾ
ಚಾರಣ ಮಾಡುವೆಯಲ್ಲ
ತರುಣನ ಬಾಳಲ್ಲಿ ತಂಗಾಳಿ ಸ್ಪರ್ಶಗೈಯಲು
ಮುತ್ತಿದವಳು ನೀನು

ಶೃಂಗಾರದ ಸಮಯಕೆ ಅವಿರತ ಸ್ವರ್ಗಲೋಕದಿ
ಕಾದು ಹೋದೆಯಲ್ಲ
ಕಂಗಳಲ್ಲಿ ಸುಖದ ಸ್ವಪ್ನಗಳನು ಒತ್ತಂಬದಲಿ
ಒತ್ತಿದವಳು ನೀನು

ಅಭಿನವನ ಪದದಲ್ಲಿ ಒನಪು ವೈಯಾರದೊಳು
ಮೂಡಿದೆಯಲ್ಲ ಸಖಿ
ನಭದ ತಾರೆಗಳಿಗೆ ಅನುಪಮ ಸೌಂದರ್ಯವನು
ಮೆತ್ತಿದವಳು ನೀನು

-ಶಂಕರಾನಂದ ಹೆಬ್ಬಾಳ, ಇಳಕಲ್                        *****