ಯುಗಾದಿಯ ಈ ಸಂಭ್ರಮದ ದಿನದಂದು ಕರ್ನಾಟಕ ಕಹಳೆ ಡಾಟ್ ಕಾಮ್ ‘ಕಾವ್ಯ ಕಹಳೆ’ ಎಂಬ ನೂತನ ಕಾಲಂ ಆರಂಭಿಸುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಹಬ್ಬ ಹರಿದಿನಗಳು, ರಾಷ್ಟ್ರೀಯ ಹಬ್ಬಗಳ ದಿನದಂದು ಹೆಚ್ಚೆಚ್ಚು ಕವಿ, ಕವಿಯತ್ರಿಯರ ಕವಿತೆಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಲಾಗುವುದು. ಎಲ್ಲರಿಗೂ ‘ಯುಗಾದಿಹಬ್ಬದ ಶುಭಾಶಯಗಳು’ (ಸಂಪಾದಕರು)
ಸಂಭ್ರಮದ ಯುಗಾದಿ
ಮೈಮನಗಳಲಿ ಹೊಸತು ತರುವ ಯುಗಾದಿ
ಕಾಡು ಬೆಟ್ಟಗಳನು ಹಸಿರಾಗಿಸುವ ಯುಗಾದಿ
ಕೋಗಿಲೆ ಕಂಠಕೆ ರಾಗದ ರಂಗೆರೆದ ಯುಗಾದಿ
ಮಾವು ಬೇವುಗಳ ಸಮನ್ವಯಿಸಿದ ಯುಗಾದಿ
ಯುಗಾದಿಯ ಹಾದಿಗೆ ಚೈತ್ರ ಕಟ್ಟಿದ ತೋರಣ
ಇಳೆಗೆ ಹೊಳೆಪು ತಂದಿದೆ ಭಾಸ್ಕರನ ಹೊಂಗಿರಣ
ಮನೆ ಮನಗಳಲ್ಲಿ ತುಂಬಿದೆ ಸಡಗರದ ಹೂರಣ
ಪಂಚಾಗ ಪಠಣ ಭವಿಷ್ಯದ ವಿಚಾರ ಸಂಕಿರಣ
ಮೂರು ದಿನದ ಬಾಳನು ಕಳೆಯಬೇಕು ಸಾರ್ಥಕದಿ
ಇರುವಷ್ಟು ಕಾಲ ಪರಿಮಳ ಹಂಚುವ ಪುಷ್ಪದ ತೆರದಿ
ಸೋಲನು ಗೆಲುವಾಗಿಸಿವುದೇ ಯಶಸ್ಸಿನ ಹಾದಿ
ಇದರ ಸತ್ವವ ಜಗಕೆ ಸಾರುತಿದೆ ನಮ್ಮ ಯುಗಾದಿ
ವರುಷಗಳು ಉರುಳುತ್ತಿವೆ ಕಾಲನ ಕಾರನ್ನೇರಿ
ಅದರಲಿ ಹೊರಟಿದೆ ಮಾನವನ ಬಾಳ ಸವಾರಿ
ಹಾದಿ ತಪ್ಪಿಸುವ ಆಕರ್ಷಣೆ ಕೊಡುವವು ಸಫಾರಿ
ಅದಾವುದಕು ಸಿಲುಕದೆ ತಲುಪಬೇಕಿದೆ ನಮ್ಮ ಗುರಿ.
ಧರ್ಮವ ತಿಳಿದು ಬಾಳಿದರೆ ಸಂಭ್ರಮದ ಯುಗಾದಿ
ಧರ್ಮ ತುಳಿದು ಬಾಳಿದರೆ ಜೀವನ ಬರೀ ಕುದಿ! ಕುದಿ!!
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ