ಕವಿತೆ-೧:
ಯುಗಾದಿ ಮತ್ತು ಅವ್ವನ ನೆನಪು
ಪ್ರತೀ ಯುಗಾದಿ ಹಬ್ಬದಂದು ನನ್ನವ್ವ
ಅಂಗಾಲಿನಿಂದ ಹಿಡಿದು ಮೈಕೈ ನೆತ್ತಿಯವರೆಗೂ
ಬೇವಿನೆಲೆಯ ಕಾದ ಕಂಪು ಕೊಬ್ರೆಣ್ಣಿಯ ಹಚ್ಚಿ ಬರೀ ಮೈಯಲ್ಲೇ ಅಂಗಳದ ಬಿಸಿಲಿಗೆ ಓಡಿಸುತ್ತಿದ್ದಳು!
ದೇಹ ಮನಸ್ಸೆಲ್ಲಾ ಎಣ್ಣೆ ಹಿಂಗಿ
ಬಿಸಿಲು ಬೆವರು ಕೂಡಿ ನಲಿದ ಮೇಲೆ
ಅವ್ವ,ಬೇವಿನ ಎಲೆ ಬಿಸಿನೀರ ಸಾಂಗತ್ಯದಲಿ
ಸೋಪಿಲ್ಲದೆ ಸ್ನಾನಮಾಡಿಸಿ
ಹಳೆಯದೋ ಹೊಸದೋ ಬಟ್ಟೆತೊಡಿಸಿ
ಮಕ್ಕಳಿಗೆ ಹಬ್ಬವಾಗುತ್ತಿದ್ದಳು
ಈಗ ಆ ಅವ್ವನ ಸುಖವೆಲ್ಲಿ!?
ಅವ್ವನ ಯುಗಾದಿ ಎಂದರೆ_
ಬಸಿದ ಹೊಸ ಶ್ಯಾವಿಗೆ
ಬೆಲ್ಲ ಹಾಲು ತುಪ್ಪ
ಮರುದಿನ ಹೋಳಿಗೆ,ನವಣೆ ಕಿಚಡಿ
ಕಟ್ಸಾರು
ನೆಂಜಿಕೊಳ್ಳಲು ಹೋಳು ಬದನೆ ಪಲ್ಯೆ
ಮಾಳಿಗೆ ಮ್ಯಾಲೆ ಹಾಕಿದ
ಪಂಜೆ,ಸೀರೆಗಂಟಿದ ಶೆಂಡಿಗೆ
ಕರಿದ ಹಪ್ಪಳ
ಸಣ್ಣ ಜಾಡಿಯ
ಕಳಿತ ಕಂಪು ಮಾವಿನ
ಉಪ್ಪಿನ ಕಾಯಿ
ಅವ್ವನ ಯುಗಾದಿಯೆಂಬೋ
ಯುಗಾದಿ!
ಬಾಯೆಲ್ಲಾ ಬರೀ ಸಿಹಿಯಿದ್ದಾಗ
ಯುಗಾದಿ ಕಳೆದು ಕರಿಯ ಆರಂಭ
ಅಲ್ಲಿಯೂ ಅವಳದೇ ಪಾತ್ರ
ಪುಟ್ಟ ಪಾಲು ಹಾಕಿದ ಆಡು,ಕುರಿ,ಓತ,ಟಗರಿನದೋ
ಮಾಂಸ ತಂದು
ಒಣ ಕೊಬ್ಬರಿ,ಯಾಲಕ್ಕಿ,ಚೆಕ್ಕಿ,ಶುಂಠಿ,ಅವಿಜಗಳ
ಒಣಖಾರಾ,ಬೆಳ್ಳುಳ್ಳಿ,ಕರಿದ ಈರುಳ್ಳಿ
ರುಚಿ ಉಪ್ಪುಬೆರೆತ ಒರಳಲ್ಲಿ ರುಬ್ಬಿದ ಗುಂಡು ಮಸಾಲೆ
ಎಲ್ಲವೂ ಅವಳ ಕೈಮನವ ಸುಗಂಧವಾಗಿಸಿ
ಅಲ್ಪಪ್ರಾಣದೆಣ್ಣೆಯಲಿ ಒಂದೇ ಸವನೆ ಬೇಯುತ್ತಿದ್ದರೆ
ಮನೆ ಅಂಗಳ ಓಣಿಯೆಲ್ಲಾ ಕಂಪೋ
ಕಂಪು!
ಇಲ್ಲಿ ಕುರಿ,ಅಲ್ಲಿ ಕೋಳಿ
ಇನ್ನೆಲ್ಲೋ ಕೆರೆಯ ಮುಳ್ಳುಮೀನು
ಊರಿಗೆ ಊರೇ ಹಬ್ಬ
ಈ ಭಾಗ್ಯವಿಲ್ಲದವರಿಗೆ
ಹೋಳಿಗೆ ಹೂರಣವೇ ಸೌಭಾಗ್ಯ!!
ಚೆಂಡಾಟ,ಚಿಣ್ಣಿಕೋಲು,ಬಗರೆಯಾಟ
ಮರಕೋತಿ,ಕಪ್ಪೆ,ಲಿಂಬೆಹಣ್ಣು,ವಟ್ಟಪ್ಪಿನಾಟ
ದುಂಡುಗಲ್ಲಿನ ಪೌರುಷ,ಹೆಣ್ಣುಮಕ್ಕಳ ಕೊಬ್ರಿ ಆಟ,
ಕುಂಟಾಬಿಲ್ಲೆ
ಬಳೆಚೂರು ಕೂಡಿದ ಚಾವಿಮನೆ,ದಾಳವಾದ ಕವಡೆ- ಹುಣುಸೇ ಬೀಜ
ಓಣಿತುಂಬೆಲ್ಲಾ ಗೋಲಿಯಾಟ
ಇನ್ನೆಲ್ಲೋ ಭಜನೆ ಕೋಲಾಟ
ಸಣ್ಣಾಟ
ಬದುಕೆಂದರೆ ಹೀಗೇ ಒಟ್ಟುಗೂಡಿ ಹಬ್ಬವಾಗುವುದು
ಅವ್ವ ಬಿಟ್ಟುಹೋದ ನೆನಪಲ್ಲೇ
ನಾನು-
ನಮ್ಮಂಥವರು
ಅವ್ವ ಅಪ್ಪನ ಜೊತೆಗಿದ್ದವರು
ತೇರಾಗುವುದು
ಮಣ್ಣ ಮಮತೆಯ ಬೇರಾಗುವುದು.
🌿
ಕವಿತೆ-೨:
ಯುಗಾದಿ
ಧಗೆಯೊಳಗೂ
ತಂಪಾದ ಇಳೆ
ಅಲ್ಲಲ್ಲಿ ಹೂ ಹಸಿರು
ಬದುಕಿನ ಅಪೂಣ೯ತೆಯೊಳಗೂ
ಬೇವುಬೆಲ್ಲವಾಗಿ ಬಂದ ಯುಗಾದಿ!
ಹೊಸವರುಷವಲ್ಲವೇ
ಎಳೆಚಿಗುರನ್ನಿಟ್ಟು ಹಕ್ಕಿಹಾಡುಕಟ್ಟಿ
ಲಂಗ ದಾವಣಿಯಲ್ಲಿಯೇ
ಸಂಭ್ರಮಿಸುವ
ಹಳ್ಳಿಹುಡುಗಿಯ ಚೆಲುವು
ಸಿಹಿಯೊಳಗೂ ಬೆರೆತ ಬೇವು
ಬೇವಿನೊಳಗೂ ಬೆರೆತ ಸಿಹಿ
ಒಂದಾಗುವ ಪ್ರಕೃತಿಯ ಲಯದಂತೇ
ಮನುಷ್ಯಪ್ರೀತಿ
ಇಲ್ಲಿಂದಲ್ಲವೇ ಚಂದ್ರನೆಡೆಗೆ ದಾರಿಮೂಡಿದ್ದು
ಅವನೂ ನಮ್ಮ ಮನೆಯಂಗಳದ ರಂಗೋಲಿಯಾದದ್ದು
ನೋಟದಲ್ಲಿ ಮಾಟದಲ್ಲಿ
ಕೂಡಿಬಾಳುವ ತೋಟದಲ್ಲಿ
ನಾವುಂಡ ಬುತ್ತಿಯಲ್ಲೂ
ಅವನೂ ಉಂಡು ಬೆಳಗಿದ್ದು
ಒಂದು ಅಪೂಣ೯ಚಿತ್ರವಲ್ಲವೇ
ನಮ್ಮ ಯುಗಾದಿಗೆ ಪೂಣ೯ತೆಯ ತುಂಬಿದ್ದು
ಕಣ್ಣಬೆಳಕಿನಲ್ಲಿ ಅವನ ಬೆಳಕೂ ಮೂಡಿ
ಇಳೆಗೆ ತೋರಣವಾದದ್ದು
ಶೂನ್ಯದಿಂದಲ್ಲವೇ ನಮ್ಮೆಲ್ಲ ತತ್ತ್ವಜ್ಞಾನಗಳು ಹೊರಡುವುದು
ಹಾಗೆ ಹೊರಟವನು ಅಲ್ಲಮ
ಹಾಗೆ ಹೊರಟವನು ಚಂದ್ರಮ
ಬಯಲ ದಾರಿಯಿಂದಲೇ ಪೂಣ೯ತೆಯ ಬೆಳಕಿನೆಡೆಗೆ ಸಾಗಿನಿಂತವರು ಹಲವರು
ಧಗೆಯೊಳಗೇ ಲೋಕ ತಂಪಾಗುವುದು
ಬೆಚ್ಚಗಿನ ಕಾವಲ್ಲವೇ
ತಾಯಮಕ್ಕಳನು
ಸಲವಿರುವುದು
ಹೂಹಸಿರ ಪಾದ ಮೂಡಿಸಿರುವುದು
ಯುಗಾದಿ ಎಂದರೆ
ಬಾಳು ಹೊರಳಿ ಮತ್ತೆ ಹೊಸ
ಕನಸು ಚಿಗುರುವುದು
ಹೊಸ ಮಧುರ ಮಾತಾಗುವುದು.
🌿🌿
ಕವಿತೆ-೩:
ಮತ್ತೆ ಯುಗಾದಿ
ಹಾಗೆ ಒಂದಿಷ್ಟು ಬಿಡುವು
ಮತ್ತೊಂದಿಷ್ಟು ಚೈತನ್ಯ
ಮರಳಿ ಬರುವ ಮನಸ್ಸು!
ಗೆಳೆಯರ ಜೊತೆ ಕಾವ್ಯದ ಮಾತು
ಹೂ ಚಿಟ್ಟೆಯ ಮಾತು
ಮಗುವಿನ ಬಾಳಿನ
ಸುಂದರ ಮಾತು
ಕದಡಿದ ಕಡಲನ್ನು
ನದಿ ಮುಟ್ಟಿ ಬೆಳಗಿದ ಮಾತು
ಮಹಾದಾಯಿಯ ಮಹಾತಾಯಿಯ
ಸಂತೈಸುವ ನೂರು ಕೈಗಳ
ಅನ್ನದಂಬಲಿಯ ಮಾತು
ಗಿಣಿ ಕೂತು ಆಲದ ಮರ ಕುಕ್ಕುವ
ಆಲದ ಮೇಲೆಯೇ ಗಿಣಿ ಕೂರುವ
ಒಮ್ಮೊಮ್ಮೆ ಆಕಾಶಕೆ ಸಿಡಿಲೂ ಬಡಿಯುವ
ಸಹಜ ಪ್ರಾಸದ ಆಯಾಸದ ಮಾತು!
ಅಂತೂ ಮಾತು ಮುಗಿದು
ಮತ್ತೆ ಹೊಸ ಮಾತು ಬರುತ್ತಿದೆ
ಸುಗ್ಗಿ ಮುಗಿದು ಯುಗಾದಿ ಬರುವಂತೆ.
🌿🌿🌿
ಕವಿತೆ-೪:
ಯುಗಾದಿಯ ದಿನ ಮತ್ತು
ನಾಡಾಡಿಯ ನಾದಲೋಕ
ನಿನ್ನಂತೇ ಹಾಡಿದವರು
ಬದುಕೇ ಸಿನೇಮಾವಾದವರು
ಗರ್ದಿಗಮ್ಮತ್ತಿನ ಎದೆಭೂಮಿಯಲ್ಲಿ
ನಾದವಿಡಿದು ನಿಂತವರು
ಯಾರಿರುವರೋ ಸಂಕಪ್ಪ…
ದೈವ,ಊರಕುಲ,ನಾಡು ದೇಶಗಳ ಚರಿತೆ ಹೇಳಿದರೂ
ಭಾಷೆ ಸಂಸ್ಕೃತಿಗಳ ಕಲಾತೋರಣವ
ನುಡಿಚಿತ್ರಗಳಲ್ಲಿ ಕಟ್ಟಿದರೂ
ನಿನ್ನ ಮನವ ಕಟ್ಟಿನಿಂತವರು ಯಾರೋ…?
ಹಿರಿಯರಿಗೆ ಸಂಕನಾಗಿ
ಕಿರಿಯರಿಗೆ ಸಂಕಪ್ಪನಾಗಿ
ಉಾರೂರ ಮಕ್ಕಳಿಗೆ ಸಂಕಪ್ಜಜ್ಜನಾಗಿ
ಬೆಳೆದೆಯಲ್ಲವೇ ನೀನು
ನನ್ನ ಬಾಲ್ಯದಲ್ಲಿಯೂ ನೀನಿದ್ದೆ!?
ನಿನ್ನಜ್ಜ ಮುತ್ತಜ್ಜರಿದ್ದರು
ನಿಜ.,
ನೀನೋ..ನಿನ್ನಜ್ಜ ಮುತ್ತಾತರೋ
ಬಂದು ಹೋಗಿರುವರು ನನ್ನೂರಿಗೆ
ಅದೇ ಜಾಗವಲ್ಲವೇ
ನಾಗರಪಂಚಮಿಯ ದಿನ
ಯುಗಾದಿಯ ದಿನ
ಊರ ದೊಡ್ಡ ಬೇವಿನ ಮರದಡಿಯಲಿ
ಗರ್ದಿಗಮ್ಮತ್ತಿನ ಅಲಂಕೃತ ಪೆಟ್ಟಿಗೆಯನು
ಕಟ್ಟಿಗೆಯ ಕಾಲುಗಳ ಮೇಲಿರಿಸಿ
ಕೈಗೆಜ್ಜೆಯಲಿ
ಎದೆಯ ತಾಳವನುಲಿಸಿ
ನುಡಿದ ನಾದದ ಲೋಕವೊಂದು
ಇನ್ನೂ ಧ್ವನಿಸುತ್ತಲೇ ಇದೆ
ನೀನು ನುಡಿಸಿದ,
ನೀವು ನುಡಿಸಿದ ಮೈಲಾರ
ಕುರುವತ್ತಿ ಕೊಟ್ಟೂರು
ಕೂಲಹಳ್ಳಿ ನಾಯಕನಹಟ್ಟಿ
ಸೌದತ್ತಿ ಹುಲಿಗಿ
ಶಿರಹಟ್ಟಿ ಜಾತ್ರೆ ಉರುಸುಗಳಲ್ಲಿ
ನಿನ್ನದೇ ಬಳಗದ ನುಡಿತೇರು ತಂದೆ
ನುಡಿಸುತ್ತ
ಬದುಕ ನಡೆಸುತ್ತ
ತಾಯ್ಮಕ್ಕಳ ನಗಿಸುತ್ತ
ಜೀವನವ ಸವೆಸಿದೀ ಸಂಕಪ್ಪಾ…
ನಿನ್ನ ಸಂಕಲ್ಪದ ಯಾತ್ರೆ ಕೊನೆಯಾಗದಿರಲಿ
ಗರ್ದಿಗಮ್ಮತ್ತಿನ ಜೀವನಾದ
ನಮ್ಮ ಮನದ ಕಂಗಳ ತುಂಬುತ್ತಲೇ ಇರಲಿ.
🌿🌿🌿🌿
ಕವಿತೆ-೫:
ಬೆಳಗಿನ ಯುಗಾದಿ
ಅತ್ತ ಕೋಗಿಲೆ ಹಾಡು ಇತ್ತ ನವಿಲಿನ ಹಾಡೂ
ಎರೆಡೂ ಬೆರೆತಿದೆ ಇಲ್ಲಿ
ಧಾರವಾಡದ ಶಹರಿನಲ್ಲಿ
ಅತ್ತ ಅವಳ ಯುಗಾದಿ ಇತ್ತ ಇವನ ಏಕಾಂತದ ಹೊಸಹಾದಿ ಸಂಧಿಸಿದೆ ಇಲ್ಲಿ
ನವಮನ್ವಂತರದ ಚಿಗುರಿನಲ್ಲಿ
ಅಲ್ಲಿ ಹೂವಿಟ್ಟಿದೆ ಇಲ್ಲಿ ಗೊಂಚಲು ತೂಗಿದೆ
ಎಲ್ಲರಿಗೂ ಅವರವರದೇ ಆದ
ವಸಂತ ಬಂದನ್ನಿಲ್ಲಿ
ಅಲ್ಲಿ ದುಃಖವೂ ಇದೆ ಸುಖವು ಹೆಪ್ಪುಗಟ್ಟಿದೆ
ಪ್ರೀತಿ ಹಂಚಲು
ಬೇವುಬೆಲ್ಲವಿದೆ ಇಲ್ಲಿ
ಬಾss ನನ್ನಲ್ಲಿ ನೀನು ನಿನ್ನಲ್ಲಿ ನಾನು
ಸಮರಸವಾಗಲು
ಜೀವನವಿದೆಯಿಲ್ಲಿ.
🌿🌿🌿🌿🌿
🦜-ಡಾ.ನಿಂಗಪ್ಪ ಮುದೇನೂರು, ಧಾರವಾಡ