ನನ್ನ ಕವಿತೆ
ಕವಿತೆ ನೊಂದವರ ಉಸಿರ ಪಂಜಿನ ಬೆಳಕಾಗಿ
ಕವಿತೆ ಹಸಿದವರಿಗೆ ಅನ್ನವಾಗಿ
ಲೋಕದ ಕಸ ಗುಡಿಸುವ ಇಳೆಯ ಮಕ್ಕಳಿಗೆ ಹಾಲಾಗಿ
ಮಹಾನಗರದ ಸೋಗೆ ಬಿಲಗಳಲ್ಲಿ ಬೆವರುವ
ಕಪ್ಪು ಬಣ್ಣದ ಕರಿಮಾಯಿಗಳಿಗೆ ದುಡಿಮೆಯಾಗಿ
ಸೂಟು ಬೂಟು ಧರಿಸಿ ಖುರ್ಚಿಯಲ್ಲಿ ಧಿಮಾಕು ಬಿಸಾಕುವವರ ಮುಂದೆ ಎದೆಯುಬ್ಬಿಸಿ ನಿಂತ ಓದಿದ ಬಡವನ ಧೈರ್ಯವಾಗಿ
ಹೆಣ್ಣುಮಕ್ಕಳ ದಿಟ್ಟತನದ ಭರವಸೆಯಾಗಿ
ಒಡಮೂಡುತ್ತದೆ
ಎಂದಾದರೊಂದು ದಿನ ಶೋಷಕರ ಕೊರಳಪಟ್ಟಿ ಹಿಡಿದು ನ್ಯಾಯ ಕೇಳುತ್ತದೆ
ಎಲ್ಲಿಯವರೆಗೆ ಸಮಬಾಳು, ಸಹಬಾಳ್ವೆ, ಸಾಧ್ಯವಿಲ್ಲವೋ ಅಲ್ಲಿಯವರೆಗೆ ಹೋರಾಡುತ್ತಲೇ ಇರುತ್ತದೆ
ಪ್ರೇಮದ ಸಹನೆಯ ಅಮೃತವನು ಕೊಡುತ್ತದೆ
– ಡಾ. ಸತ್ಯಮಂಗಲ ಮಹಾದೇವ, ಬೆಂಗಳೂರು
*****